ಸೇವುಣ ವಂಶ - 
	ಕರ್ನಾಟಕದಲ್ಲಿ ಸು.9ನೆಯ ಶತಮಾನದಿಂದ 14ನೆಯ ಶತಮಾನದ ಆರಂಭದವರೆಗೆ ಆಳಿದ ಒಂದು ರಾಜಮನೆತನ. ಇವರು ಇತ್ತೀಚಿನವರೆಗೂ ಇತಿಹಾಸಕಾರರಿಗೆ ದೇವಗಿರಿಯ ಯಾದವರೆಂದೇ ಪರಿಚಿತರಾಗಿದ್ದರು. ಮುಸ್ಲಿಂ ಚರಿತ್ರಕಾರರನ್ನು ಅನುಸರಿಸಿ ಇತ್ತೀಚಿನ ಇತಿಹಾಸಕಾರರೂ ಇವರನ್ನು ಯಾದವ ವಂಶದವರೆಂದೇ ವ್ಯವಹರಿಸುತ್ತಿದ್ದರು. ಆದರೆ ಎ.ವಿ. ನರಸಿಂಹಮೂರ್ತಿ ಮತ್ತು ಶ್ರೀನಿವಾಸ ರಿತ್ತಿ ಎಂಬ ವಿದ್ವಾಂಸರು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಇವರನ್ನು ದೇವಗಿರಿಯ ಸೇವುಣರೆಂದು ಕರೆಯಬೇಕೆಂಬ ವಾದವನ್ನು ಮಂಡಿಸಿದ ಅನಂತರ ಇವರನ್ನು ಸೇವುಣರೆಂದೇ ವ್ಯವಹರಿಸಲು ಪ್ರಾರಂಭಿಸಲಾಗಿದೆ. 

	ರಾಜಕೀಯ ಇತಿಹಾಸ : ಸೇವುಣರು ಯಾದವವಂಶದವರು. ಆದರೆ ಸೇವುಣಚಂದ್ರ ಎಂಬ ರಾಜನು ಪ್ರಸಿದ್ಧಿಯನ್ನು ಗಳಿಸಿದ್ದರಿಂದ ಇವನ ವಂಶಕ್ಕೆ ಸೇವುಣ ವಂಶವೆಂದು ಹೆಸರಾಯಿತೆಂದು ಚಾತುರ್ವರ್ಗಚಿಂತಾಮಣೀ ಗ್ರಂಥದ  ಕರ್ತೃವಾದ ಹೇಮಾದ್ರಿ ಹೇಳಿದ್ದಾನೆ. ಇದನ್ನು ಕೆಲವು ಶಾಸನಗಳು ಸ್ಪಷ್ಟೀಕರಿಸುತ್ತವೆ. ಈ ವಂಶದ ಹೆಸರನ್ನು ಉಲ್ಲೇಖಿಸುವಾಗ ಸೇವುಣ, ಸೇಉಣ ಎಂದೂ ಬರೆಯಲಾಗುತ್ತದೆ. ಶಾಸನಗಳಲ್ಲಿ ಈ ಎರಡು ರೂಪಗಳೂ ದೊರೆಯುತ್ತವೆ. ಈ ಪದದ ಅರ್ಥ ಮಾತ್ರ ಇನ್ನೂ ತಿಳಿದಿಲ್ಲ. ಸೇವುಣ ವಂಶದ ಮೂಲದ ಬಗೆಗೂ ವಾದಗಳಿವೆ. ಫ್ಲೀಟ್, ಭಂಡಾರಕರ್, ಅಳತೇಕರ, ಡೆರೆಟ್ ಮುಂತಾದ ವಿದ್ವಾಂಸರು ಸೇವುಣರು ಮಹಾರಾಷ್ಟ್ರದವರು ಎಂಬ ವಾದವನ್ನು ಮಂಡಿಸಿದ್ದರು. ಇಲ್ಲಿಯವರೆಗೂ ಈ ಅಭಿಪ್ರಾಯವೇ ಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ನಡೆದಿರುವ ಸಂಶೋಧನೆಗಳಿಂದ ಈ ವಾದದಲ್ಲಿ ಹುರುಳಿಲ್ಲವೆಂದೂ ಇವರು ಕನ್ನಡಿಗರೆಂದೂ ಸ್ಪಷ್ಟವಾಗಿದೆ. ಇವರು ಮಧುರಾನಗರದಲ್ಲಿದ್ದವರೆಂದೂ ಅನಂತರವೇ ಕೃಷ್ಣನ ಕಾಲದಲ್ಲಿ  ದ್ವಾರಾವತಿಗೆ ಬಂದರೆಂದೂ ಹೇಮಾದ್ರಿಯ ಗ್ರಂಥ ಮತ್ತು ಕೆಲವು ಶಾಸನಗಳಿಂದ ತಿಳಿಯುತ್ತದೆ. ಆದರೆ ಇದಕ್ಕೆ ಚರಿತ್ರಾಧಾರವಿಲ್ಲ. ಸೇವುಣ ರಾಜರ ಹೆಸರುಗಳಾದ ಧಡಿಯಪ್ಪ, ವಡ್ಡಿಗ, ರಾಜಗ, ಮಲ್ಲುಗಿ, ಜೈತುಗಿ ಮುಂತಾದವು ಕನ್ನಡದ ಪದಗಳು. ಈ ರಾಜರು ಹಾಕಿಸಿದ ಶಾಸನಗಳಲ್ಲಿ ಬಹುಪಾಲು ಕನ್ನಡ ಭಾಷೆಯಲ್ಲಿವೆ. ಇವರ ರಾಜ್ಯ ಬಹುಪಾಲು ಕನ್ನಡನಾಡನ್ನು ಒಳಗೊಂಡಿತ್ತು. ಇವರು ವಿವಾಹ ಸಂಬಂಧ ಬೆಳೆಸಿದ ರಾಜವಂಶಗಳೂ ಕನ್ನಡನಾಡಿನವು. ಇವರು ಮರಾಠಿಯನ್ನು ಪ್ರೋತ್ಸಾಹಿಸಿದರೂ ಕನ್ನಡಕ್ಕೂ ಸಾಕಷ್ಟು ಪ್ರೋತ್ಸಾಹಕೊಟ್ಟರು. ಕೆಲವು ರಾಜರು ಸೆಲ್ಲವಿಡೆಗ, ಕರ್ಣಾಟರಾಯವಂಶಾಭಿರಾಮ ಎಂಬ ಬಿರುದುಗಳನ್ನೂ ಧರಿಸಿದರು. ಈ ಎಲ್ಲ ಅಂಶಗಳನ್ನೂ ಪರಿಶೀಲಿಸಿದರೆ, ಇವರು ಕನ್ನಡ ನಾಡಿನವರು ಮತ್ತು ರಾಜಕೀಯ ಕಾರಣಗಳಿಗೋಸ್ಕರ ಉತ್ತರ ಕರ್ನಾಟಕದಲ್ಲಿ ತಮ್ಮ ರಾಜ್ಯಸ್ಥಾಪನೆ ಮಾಡಿ ಮಹಾರಾಷ್ಟ್ರದ ಲ್ಲಿಯೂ ತಮ್ಮ ರಾಜ್ಯವನ್ನು ವಿಸ್ತರಿಸಿದರೆಂದು ತಿಳಿಯುತ್ತದೆ. 

	ಇವರ ರಾಜಕೀಯ ಇತಿಹಾಸವನ್ನು ಪರಿಶೀಲಿಸಿದಾಗ ಇವರನ್ನು ಸಾಮಂತರು ಮತ್ತು ಸ್ವತಂತ್ರರು ಎಂದು ವಿಭಾಗಿಸಬೇಕಾಗುತ್ತದೆ. ಮೊದಲನೆಯ ರಾಜನಿಂದ ಪ್ರಾರಂಭವಾಗಿ ಐದನೆಯ ಭಿಲ್ಲಮನವರೆಗೆ ಇವರು ಸಾಮಂತರಾಗಿ ಆಳಿದರು. ಅನಂತರ ಐದನೆಯ ಭಿಲ್ಲಮ ಸ್ವತಂತ್ರನಾಗಿ ರಾಜ್ಯ ಸ್ಥಾಪನೆಮಾಡಿದ. ಇವನಿಂದ ಪ್ರಾರಂಭವಾಗಿ ಇವರ ರಾಜ್ಯ ಮಹಮದೀಯರ ಅಧೀನವಾಗುವವರೆಗೆ ಇವರು ಸ್ವತಂತ್ರವಾಗಿ ಆಳಿದರು. ಇವರು ಸಾಮಂತರಾಗಿದ್ದಾಗ ಹೊರಡಿಸಿದ ಶಾಸನಗಳು ಬಹು ಕಡಿಮೆ. ಕೆಲವು ರಾಜರ ಶಾಸನಗಳು ದೊರಕಿಲ್ಲ. ಇದರಿಂದ ಈ ಕಾಲದ ಇವರ ರಾಜಕೀಯ ಚರಿತ್ರೆಯನ್ನು ತಿಳಿಯುವುದು ಕಷ್ಟವಾಗಿದೆ. 

	ಹೇಮಾದ್ರಿಯ ರಾಜಪ್ರಶಸ್ತಿಯ ಪ್ರಕಾರ ಪ್ರತಿಬಾಹುವಿನ ಮಗನಾದ ಸುಬಾಹು ತನ್ನ ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಿ, ದಕ್ಷಿಣ ಭಾಗವನ್ನು ದೃಢಪ್ರಹಾರನಿಗೆ ಕೊಟ್ಟನೆಂದು ತಿಳಿಯುತ್ತದೆ. ಶಾಸನಗಳಲ್ಲಿ ಇವನ ಹೆಸರು ಕಾಣಬರುವುದಿಲ್ಲ. ಬಹುಶಃ ಇವನು ಚರಿತ್ರಾರ್ಹನಲ್ಲ. ಅನಂತರ ಆಳಿದ ದೃಢಪ್ರಹಾರನ ಹೆಸರು ಕೆಲವು ಶಾಸನಗಳಲ್ಲಿ ಮಾತ್ರ ಕಾಣಬರುತ್ತದೆ. ಅನಂತರ ಬಂದವನೇ ಸೇವುಣ ಚಂದ್ರ I. ಬಹುಶಃ ಇವನೇ ಈ ವಂಶದ ಮೊದಲನೆಯ ದೊರೆ. ಇವನ ರಾಜಧಾನಿ ಸಿಂದಿನೇರ ಎಂಬ ಪ್ರಾಂತದಲ್ಲಿದ್ದ ಸೇವುಣಪುರ, ಇವನ ಕಾಲ ಸು.850-75. ಇವನ ತರುವಾಯ ರಾಜರಾದ ಒಂದನೆಯ ಧಡಿಯಪ್ಪ, ಒಂದನೆಯ ಭಿಲ್ಲಮ ಮತ್ತು ರಾಜಗ ಇವರ ವಿಷಯ ತಿಳಿಯದು. ಅನಂತರ ಬಂದವನು ಒಂದನೆಯ ವಡ್ಡಿಗ (960-75). ಇವನು ರಾಷ್ಟ್ರಕೂಟ ದೊರೆ ಮುಮ್ಮಡಿ ಕೃಷ್ಣನ ಸಾಮಂತನಾಗಿದ್ದ. ನಾಲ್ವಡಿ ಗೋವಿಂದನನ್ನು ಪದಚ್ಯುತನನ್ನಾಗಿ ಮಾಡಲು ಇವನು ಮುಮ್ಮಡಿ ಕೃಷ್ಣನಿಗೆ ಸಹಾಯ ಮಾಡಿ ಪ್ರಾಮುಖ್ಯವನ್ನು ಪಡೆದು ದೋರಪ್ಪನ ಮಗಳಾದ ವಡ್ಡಿಯವ್ವಳನ್ನು ವಿವಾಹವಾದ. ಇವಳು ರಾಷ್ಟ್ರಕೂಟ ರಾಜಕುಮಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ವಡ್ಡಿಗನ ಅನಂತರ ಇಮ್ಮಡಿ ಭಿಲ್ಲಮನಾದ (975-1000) ಇವನು ರಾಷ್ಟ್ರಕೂಟರನ್ನು ಕಡೆಗಣಿಸಿ ಚಾಳುಕ್ಯ ತೈಲಪನಿಗೆ ಸಹಾಯ ಮಾಡಿದ. ಮುಂಜನನ್ನು ಸೋಲಿಸಲು ತೈಲಪನಿಗೆ ಇವನು ಸಹಾಯ ಮಾಡಿದುದ ಕ್ಕಾಗಿ ಆತ ಇವನಿಗೆ ಮಹಾಸಾಮಂತ ಎಂಬ ಬಿರುದನ್ನೂ ಅಹಮದ್ ನಗರ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳನ್ನೂ ಕೊಟ್ಟ. ಇದರಿಂದ ಸೇವುಣರ ಪ್ರಾಬಲ್ಯ ಹೆಚ್ಚಲು ಅವಕಾಶವಾಯಿತು. ಇವನು ಝಂಝರಾಜನ ಮಗಳಾದ ಲಚ್ಚಿಯವ್ವಳನ್ನು ಮದುವೆಯಾದ. ಒಟ್ಟಿನಲ್ಲಿ ಸೇವುಣ ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ ಕೀರ್ತಿ ಎರಡನೆಯ ಭಿಲ್ಲಮನಿಗೆ ಸಲ್ಲುತ್ತದೆ.

	ಅನಂತರ ರಾಜನಾದ ಪೇನುಗಿ ಚಾಳುಕ್ಯ ಗೊಗ್ಗಿದೇವನ ಮಗಳಾದ ನಾಯಿಲ್ಲದೇವಿಯನ್ನು ಮದುವೆಯಾದ. ಅನಂತರ ರಾಜನಾದವನು ಮುಮ್ಮಡಿ ಭಿಲ್ಲಮ (1025-55). ಕಲಾಸ್ ಬದ್ರುಕ್ ಮತ್ತು ದೇವಲಾಲಿಯಲ್ಲಿ ಇವನ ಶಾಸನಗಳು ದೊರಕಿವೆ. ಇವನು ಚಾಳುಕ್ಯ ಎರಡನೆಯ ಜಯಸಿಂಹನ ಪುತ್ರಿಯೂ ಆಹವಮಲ್ಲ ಸೋಮೇಶ್ವರನ ಸಹೋದರಿಯೂ ಆದ ಆವಲ್ಲದೇವಿಯನ್ನು ವಿವಾಹವಾದ. ಜಯಸಿಂಹ ಮತ್ತು ಆಹವಮಲ್ಲ ಸೋಮೇಶ್ವರರಿಬ್ಬರಿಗೂ ವಿಧೇಯನಾಗಿದ್ದ ಈತ ಅವರ ಯುದ್ಧಗಳಲ್ಲಿ ಸಹಾಯ ಮಾಡಿದ. ಇವನ ಮರಣಾನಂತರ ವಡ್ಡಿಗ II, ವೇನುಗಿ II ಮತ್ತು ಭಿಲ್ಲಮ Iಗಿ ರಾಜ್ಯವಾಳಿದರು. ಇವರನ್ನು ಸೋಲಿಸಿ ಇಮ್ಮಡಿ ಸೇವುಣಚಂದ್ರ ರಾಜನಾದ (1069-98). ಚಾಳುಕ್ಯ ವಿಕ್ರಮಾದಿತ್ಯನಿಗೆ ಸಹಾಯ ಮಾಡಿ ಮಹಾಮಂಡಳೇಶ್ವರ ಎಂಬ ಪದವಿಯನ್ನು ಪಡೆದ. ಈತ ಕೊಂಕಣದ ರಾಜಕೀಯದಲ್ಲಿ ಪ್ರವೇಶಿಸಿ, ಥಾನ ಜಿಲ್ಲೆಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಇವನ ಅನಂತರ ಇವನ ಮಗನಾದ ಐರಮದೇವ ಆಳಿದ (1098-1123). ಇವನೂ ಚಾಳುಕ್ಯ 2ನೆಯ ಸೋಮೇಶ್ವರನನ್ನು ಸೋಲಿಸಲು ವಿಕ್ರಮಾದಿತ್ಯನಿಗೆ ಸಹಾಯ ಮಾಡಿದನೆಂದು ತನ್ನ ಆಶ್ವ್ಯಿಶಾಸನದಲ್ಲಿ ಹೇಳಿಕೊಂಡಿದ್ದಾನೆ. ಇವನ ರಾಜ್ಯ ನರ್ಮದಾ ತೀರದ ವರೆಗೂ ಹಬ್ಬಿತ್ತೆಂದು ಈ ಶಾಸನದಿಂದ ಗೊತ್ತಾಗುತ್ತದೆ. ಇವನ ಮರಣಾನಂತರ ಇವನ ಸಹೋದರನಾದ ಒಂದನೆಯ ಸಿಂಘಣ ರಾಜನಾದ (1123-42). ಕೆಲವು ಶಾಸನಗಳು ಇವನನ್ನು ಸೇವುಣದೇವ ಎಂದೂ ಕರೆಯುತ್ತವೆ. ಇವನು ಲಂಜೀಪುರದಿಂದ ಕರ್ಪೂರತಿಲಕ ಎಂಬ ಆನೆಯನ್ನು ತಂದು ವಿಕ್ರಮಾದಿತ್ಯನು ಕರ್ಪೂರವ್ರತವನ್ನು ಪೂರೈಸಲು ಸಹಾಯಕನಾದನೆಂದು ಹೇಮಾದ್ರಿ ಹೇಳಿದ್ದಾನೆ. ಲಂಜೀಪುರ ಕೊಂಕಣದಲ್ಲಿ ಅಥವಾ ಮಧ್ಯಪ್ರದೇಶದಲ್ಲಿದ್ದಿರಬಹುದು. ಅನಂತರ ರಾಜನಾದವನು ಮಲ್ಲುಗಿ (1142-67). ಇವನು ಪರ್ಣಖೇಟವನ್ನು ತನ್ನ ಶತ್ರುಗಳಿಂದ ಗೆದ್ದು ಉತ್ಕಲದೇಶದ ರಾಜನಿಂದ ಆನೆಗಳನ್ನು ಕಡ ಪಡೆದನು ಎಂದು ಹೇಮಾದ್ರಿ ಹೇಳಿದ್ದಾನೆ. ಪರ್ಣಖೇಟವು ಅಕೋಲಾ ಜಿಲ್ಲೆಯ ಪಾಟ್‍ಖೇಡ್ ಆಗಿರಬೇಕೆಂದು ಊಹೆ. ಉತ್ಕಲನ ವಿಜಯದ ವಿಷಯದಲ್ಲಿ ಏನೂ ತಿಳಿಯದು. ಜಲ್ಹಣನ ಸೂಕ್ತಿಮುಕ್ತಾವಳಿ ಗ್ರಂಥ ಮಲ್ಲುಗಿಯ ವಿಜಯಗಳನ್ನು ವಿವರಿಸುತ್ತದೆ. ಮಲ್ಲುಗಿಯ ಮರಣಾನಂತರ ಸೇವುಣ ವಂಶದಲ್ಲಿ ಕಲಹಗಳು ಪ್ರಾರಂಭವಾದವು. ರಾಜ್ಯದಲ್ಲಿ ಕ್ಷೋಭೆ ಉಂಟಾಯಿತೆಂದೂ ಇದರಲ್ಲಿ ಅಮರ ಮಲ್ಲುಗಿ, ಅಮರ ಗಾಂಗೇಯ, ಗೋವಿಂದರಾಜ, ಕಾಲಿಯ ಬಲ್ಲಾಳ ಮತ್ತು ಕರ್ಣ ಎಂಬುವರು ಪಾಲ್ಗೊಂಡಿದ್ದರೆಂದೂ ಹೇಮಾದ್ರಿಯ ರಾಜ್ಯ ಪ್ರಶಸ್ತಿ ಮತ್ತು ಸಮಕಾಲೀನ ಶಾಸನಗಳಿಂದ ತಿಳಿಯುತ್ತದೆ. ಇವರ ಪರಸ್ಪರ ಸಂಬಂಧಗಳು ಅಸ್ಪಷ್ಟ. ಈ ಅರಾಜಕತೆಯನ್ನು ಹೋಗಲಾಡಿಸಿ ಸೇವುಣರನ್ನು ಸ್ವತಂತ್ರರನ್ನಾಗಿ ಮಾಡಿದವನು ಐದನೆಯ ಭಿಲ್ಲಮ.

	ಶೂರನೂ ಧೀರನೂ ಆದ ಐದನೆಯ ಭಿಲ್ಲಮ (1173-92) ತನ್ನ ದಾಯಾದಿಗಳನ್ನು ಸದೆಬಡಿದು ಚಾಳುಕ್ಯರಿಂದ ಸ್ವತಂತ್ರನಾಗಿ ಸೇವುಣರ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದ. 1173ರ ಶಾಸನವೊಂದರಲ್ಲಿ ಇವನ ಹೆಸರು ಕಾಣಸಿಗುವುದರಿಂದ ಇವನು ಆ ಸಮಯಕ್ಕಾಗಲೇ ರಾಜನಾಗಿದ್ದನೆಂದು ತಿಳಿಯುತ್ತದೆ. ಆದರೆ ಇವನು ಸ್ವತಂತ್ರನಾದುದು 1184ರಲ್ಲಿ ಎಂದು ಇವನ ಶಾಸನಗಳಿಂದ ಹೇಳಬಹುದು. ಭಿಲ್ಲಮ ರಾಜನಾದ ಸಮಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳುಂಟಾಗುತ್ತಿದ್ದವು. ಕಳಚುರಿ ಬಿಜ್ಜಳನು ಚಾಳುಕ್ಯರನ್ನು ಸೋಲಿಸಿ ಪ್ರಭಾವಿತನಾಗಿದ್ದ. ಇದನ್ನು ಗಮನಿಸಿದ ಇವನು ತಾನೂ ಚಾಳುಕ್ಯರನ್ನು ಕಡೆಗಣಿಸಿ, ಕಳಚುರಿಗಳ ಸಾಮಂತನಾದ. ಆದರೆ ಕಳಚುರಿ ಬಿಜ್ಜಳನ ಮರಣಾನಂತರ ಆ ರಾಜ್ಯಕ್ಕೆ ಎಲ್ಲೆಡೆಯಲ್ಲಿಯೂ ವಿರೋಧ ಹೆಚ್ಚಿತು. ಇದರಿಂದ ಸ್ಫೂರ್ತಿಯನ್ನು ಪಡೆದ ಇವನು ಕಳಚುರಿಗಳನ್ನು ಎದುರಿಸಲು ಹವಣಿಸಿ, ಬಿಜ್ಜಳನ ಮಗನಾದ ಮೈಲುಗಿಯ ಮೇಲೆ ಯುದ್ಧಮಾಡಿ ಆತನನ್ನು ಸೋಲಿಸಿದ. ಈ ಮಧ್ಯೆ ಚಾಳುಕ್ಯ ನಾಲ್ಕನೆಯ ಸೋಮೇಶ್ವರ ಹೇಗಾದರೂ ಮಾಡಿ ತನ್ನ ರಾಜ್ಯವನ್ನು ಸ್ಥಾಪಿಸಬೇಕೆಂದು ಪ್ರಯತ್ನಗಳನ್ನು ನಡೆಸುತ್ತಿದ್ದ. ಸು. 1180ರ ಸಮಯಕ್ಕೆ ಕಳುಚುರಿಗಳನ್ನು ಸೋಮೇಶ್ವರ ಸೋಲಿಸಿದ. ಇದೇ ಸಮಯದಲ್ಲಿ ಹೊಯ್ಸಳರು ಸ್ವತಂತ್ರರಾಗಲು ಹವಣಿಸುತ್ತಿದ್ದರು. ಇವುಗಳೆಲ್ಲವನ್ನು ಇವನು ಗಮನಿಸುತ್ತಿದ್ದರೂ ಉತ್ತರದೇಶದ ಕಡೆಗೆ ತನ್ನ ಗಮನವನ್ನು ಹರಿಸಿದ. ಮಂಗಳವೇಷ್ಟಕದ ರಾಜನಾದ ರಾಯಮುರಾರಿ ಸೋವಿದೇವನ ಮಗನಾದ ಬಿಜ್ಜಳನನ್ನು ಸೋಲಿಸಿದ. ಅನಂತರ ಅಂಸಲ ರಾಜ್ಯದ ದೊರೆಯನ್ನು ಸೋಲಿಸಿ ಅವನಿಂದ ಶ್ರೀವರ್ಧನವೆಂಬ ನಗರವನ್ನು ವಶಪಡಿಸಿಕೊಂಡ (ಕೊಂಕಣದಲ್ಲಿ ಶ್ರೀವರ್ಧನವೆಂಬ ನಗರವಿದೆ. ಪುಣೆ ನಗರಕ್ಕೆ ಸಮೀಪದಲ್ಲಿ ಮತ್ತೊಂದು ಇದೇ ಹೆಸರಿನ ನಗರವಿದೆ). ವೀರವರ್ಧನ ವೆಂಬ ನಗರವನ್ನು ಹೊಯ್ಸಳ ಬಲ್ಲಾಳನು ಸೇವುಣರಿಂದ ಗೆದ್ದುಕೊಂಡ ನೆಂದೂ ಶಾಸನವೊಂದರಲ್ಲಿ ಹೇಳಿದೆ. ಈ ಶ್ರೀವರ್ಧನ ನಗರ ಯಾವುದು ಎನ್ನುವುದು ಖಚಿತವಾಗಿ ತಿಳಿದಿಲ್ಲ. ಭಿಲ್ಲಮ ಪ್ರತ್ಯಾಂಡಕ ರಾಜನ ಮೇಲೆ ವಿಜಯವನ್ನು ಸಂಪಾದಿಸಿದನೆಂದು ಹೇಮಾದ್ರಿ ಹೇಳಿದ್ದಾನೆ. ಇದು ಭೋರ್ ರಾಜ್ಯದ ಪ್ರಚ್ಛಂದಗಡವೇ ಅಥವಾ ತೋರಣನಗರವೇ ಎಂಬುದು ತಿಳಿದಿಲ್ಲ.

	ಈ ಸಣ್ಣಪುಟ್ಟ ರಾಜರ ಮೇಲಿನ ವಿಜಯಗಳಿಂದ ಉತ್ತೇಜಿತನಾದ ಭಿಲ್ಲಮ ಮಾಳ್ವದೇಶಕ್ಕೆ ನುಗ್ಗಿದ. ಇವನ ಕರಿವೃಂದನಾಥನಾದ ಜಲ್ಹನು ಆನೆಗಳೊಡನೆ ನುಗ್ಗಿ ಮಾಳ್ವ ರಾಜನ ಸೈನ್ಯದಲ್ಲಿ ಕೋಲಾಹಲವನ್ನುಂಟು ಮಾಡಿ, ವಿಂಧ್ಯವರ್ಮನನ್ನು ಸೋಲಿಸಿದ. ಅನಂತರ ಭಿಲ್ಲಮನ ಸೈನ್ಯ ಗುಜರಾತಿನ ಚಾಳುಕ್ಯರ ಮೇಲೆ ನುಗ್ಗಿ ಎರಡನೆಯ ಭೀಮನನ್ನು ಸೋಲಿಸಿತು. ಅನಂತರ ಸೈನ್ಯ ಮಾರವಾರ ದೇಶಕ್ಕೆ ನುಗ್ಗಿತು. ನಡ್ದೋಲದಲ್ಲಿ ಆಳುತ್ತಿದ್ದ ಚಾಹಮಾನ ಕಲ್ಹಣನು ಭಿಲ್ಲಮನನ್ನು ತಡೆದ. ಮುಂದೆ ನುಗ್ಗಲಾರದೆ ಭಿಲ್ಲಮ ಸೋತು ಹಿಂತಿರುಗಿದ. ಈ ವಿಜಯಗಳಿಂದ ಇವನಿಗೆ ಯಾವ ರಾಜ್ಯ ವಿಸ್ತರಣೆಯೂ ಆಗಲಿಲ್ಲ. ಇತ್ತ ದಕ್ಷಿಣದಲ್ಲಿ 1184-86ರಲ್ಲಿ ಚಾಳುಕ್ಯ ಸೋಮೇಶ್ವರ ಕಲ್ಯಾಣವನ್ನು ಬಿಟ್ಟು ಜಯಂತಿಪುರಕ್ಕೆ ಓಡಿಹೋದ. ಮಾರ್ಗದಲ್ಲಿ ಭಿಲ್ಲಮ ಚಾಳುಕ್ಯ ಸೋಮೇಶ್ವರನನ್ನು ಎದುರಿಸಿದ. ಆದರೆ ಹೊಯ್ಸಳ ಬಲ್ಲಾಳ ಕಲ್ಯಾಣವನ್ನು ತನ್ನ ವಶಮಾಡಿಕೊಂಡ. ಕೂಡಲೆ ಭಿಲ್ಲಮ ಕಲ್ಯಾಣಕ್ಕೆ ಬಂದು ಬಲ್ಲಾಳನ ಮೇಲೆ ಯುದ್ಧವನ್ನು ಮಾಡಿ ಅವನು ಓಡಿಹೋಗುವಂತೆ ಮಾಡಿ ಅವನ ಬೆನ್ನಟ್ಟಿ ಮಾರ್ಗಮಧ್ಯದಲ್ಲಿ ತರ್ದವಾಡಿ, ಬೆಳ್ವೊಲ, ಎಡೆದೊರೆನಾಡುಗಳನ್ನು ತನ್ನ ವಶಮಾಡಿಕೊಂಡ. ಇನ್ನೇನು ಭಿಲ್ಲಮನೇ ದಕ್ಷಿಣಾಪಥದ ರಾಜನಾಗುತ್ತಾನೋ ಎನ್ನುವ ಮಟ್ಟಿಗೆ ವಿಜಯವನ್ನು ಸಂಪಾದಿಸಿದ. ಹಿಮ್ಮೆಟ್ಟಿದ ಬಲ್ಲಾಳ 1191ರಲ್ಲಿ ಯುದ್ಧಸಿದ್ಧತೆಗಳನ್ನು ಮಾಡಿಕೊಂಡು ಭಿಲ್ಲಮನ ಮೇಲೆ ಸೊರಟೂರು ಎಂಬಲ್ಲಿ ಯುದ್ಧ ಮಾಡಿದ. ಈ ಯುದ್ಧದಲ್ಲಿ ಸೋತ ಭಿಲ್ಲಮನ ಸೈನ್ಯ ಲೊಕ್ಕಿಗುಂಡಿ ಕೋಟೆಯನ್ನು ಹೊಕ್ಕಿತು. ಜೈತ್ರಸಿಂಹನ ನೇತೃತ್ವದಲ್ಲಿದ್ದ ಸೇವುಣ ಸೈನ್ಯವನ್ನು ಬಲ್ಲಾಳನು ಸೋಲಿಸಿ, ಸೇವುಣರನ್ನು ಓಡಿಸಿದ. ಭಿಲ್ಲಮ ಈ ಯುದ್ಧದಲ್ಲಿ ಪೂರ್ಣವಾಗಿ ಸೋತ. ಇವನು ಈ ಯುದ್ಧದಲ್ಲಿ ಮಡಿದನೇ ಎಂಬುದು ಸಂದೇಹಾಸ್ಪದ ವಿಷಯ. ಆದರೂ ಇವನು ಹೆಚ್ಚು ಕಾಲ ಬದುಕಲಿಲ್ಲ. ಅದೇ ವರ್ಷವೇ ಮರಣಹೊಂದಿದ. ದೇವಗಿರಿ ನಗರವನ್ನು ಸ್ಥಾಪಿಸಿ, ಸ್ವಶಕ್ತಿ ಸಾಮಥ್ರ್ಯಗಳಿಂದ ಸೇವುಣರನ್ನು ಸ್ವತಂತ್ರರನ್ನಾಗಿ ಮಾಡಿ ಸೇವುಣ ರಾಜ್ಯದ ನಿಜಸ್ಥಾಪಕನೆನಿಸಿಕೊಂಡ ಕೀರ್ತಿ ಇವನಿಗೆ ಸಲ್ಲುತ್ತದೆ.

	ಇವನ ಮರಣಾನಂತರ ಇವನ ಮಗನಾದ ಜೈತುಗಿ 1192ರಲ್ಲಿ ರಾಜನಾದ. ಹೊಯ್ಸಳರು ಸಾಧಿಸಿದ ವಿಜಯಗಳಿಂದ ಅವರು ಪ್ರಬಲರಾಗಿದ್ದರು. ಆದುದರಿಂದ ಜೈತುಗಿ ತನ್ನ ಗಮನವನ್ನು ಆ ಕಡೆ ಹರಿಸಲಿಲ್ಲ. ಇತರ ಕಡೆಗಳಲ್ಲಿ ರಾಜ್ಯ ವಿಸ್ತರಣೆಯ ದೃಷ್ಟಿಯಿಂದ ಜೈತುಗಿಯು ಕಾಕತೀಯರ ಕಡೆ ತಿರುಗಿದ. ಕಾಕತೀಯ ರಾಜನಾದ ರುದ್ರ ಮತ್ತು ಮಹದೇವ ಇಬ್ಬರನ್ನೂ ಸೋಲಿಸಿದುದೇ ಅಲ್ಲದೆ ಯುದ್ಧದಲ್ಲಿ ಕೊಂದು ತೆಲುಂಗುರಾಯ ಶಿರಃಕಮಲಮೂಲೋತ್ಪಾಟನ ಮತ್ತು ತೆಲುಂಗರಾಯಸ್ಥಾಪನಾಚಾರ್ಯ ಎಂಬ ಬಿರುದುಗಳನ್ನು ಧರಿಸಿದ. ರುದ್ರ ಮತ್ತು ಮಹದೇವ ಇಬ್ಬರೂ ಮರಣಹೊಂದಿದ ಅನಂತರ ಗಣಪತಿಯನ್ನು ಸೆರೆಹಿಡಿದು, ಅವನನ್ನೇ ಕಾಕತೀಯ ರಾಜನನ್ನಾಗಿ ಮಾಡಿದ ಕೀರ್ತಿ ಜೈತುಗಿಗೆ ಸಲ್ಲುತ್ತದೆ. ಅನಂತರ ಜೈತುಗಿಯ ಸೇನಾಧಿಪತಿಯಾದ ಸಹದೇವ ಮಾಳ್ವದೇಶಕ್ಕೆ ನುಗ್ಗಿ ಸುಭಟವರ್ಮನನ್ನು ಸೋಲಿಸಿ ಹಿಂದಿರುಗಿದ. ಜೈತುಗಿ 1200ರಲ್ಲಿ ಮರಣ ಹೊಂದಲು ಇವನ ಮಗನಾದ ಎರಡನೆಯ ಸಿಂಘಣ ರಾಜನಾದ.

	ಸಿಂಘಣನ ರಾಜ್ಯಾರಂಭದ ಕಾಲದ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತವಿರಲಿಲ್ಲ. ಆದರೆ ಇತ್ತೀಚಿನ ಸಂಶೋಧನೆಗಳಿಂದ ಇವನು 1200ರಲ್ಲಿ ಪಟ್ಟಕ್ಕೆ ಬಂದನೆಂದು ಖಚಿತವಾಗಿ ತಿಳಿದುಬರುತ್ತದೆ. ಇವನು ರಾಜನಾದ ಕೂಡಲೆ ತನ್ನ ಗಮನವನ್ನು ಹೊಯ್ಸಳರತ್ತ ತಿರುಗಿಸಿದ. ಹೊಯ್ಸಳ ರಾಜ್ಯದ ಭಾಗಗಳನ್ನು ಆಕ್ರಮಿಸಲು ಪ್ರಾರಂಭಿಸಿದ. ಹೊನ್ನಾಳಿ, ಸೊರಬ, ಶಿವಮೊಗ್ಗ ಇವನ ವಶವಾದವು. ಇಷ್ಟರಲ್ಲಿಯೇ ಬಲ್ಲಾಳ ಮೃತನಾದ. ಇದರಿಂದ ಪರಿಸ್ಥಿತಿ ಸೇವುಣರಿಗೆ ಇನ್ನೂ ಉತ್ತೇಜನಕರ ವಾಯಿತು. ಹೊಯ್ಸಳ ನಾರಸಿಂಹ ಸೇವುಣ ಸೈನ್ಯವನ್ನು ಸ್ವಲ್ಪಮಟ್ಟಿಗೆ ತಡೆದರೂ ಏನೂ ಪ್ರಯೋಜನವಾಗಲಿಲ್ಲ. ನಾರಸಿಂಹನ ಮರಣಾನಂತರ ಹೊಯ್ಸಳ ಸೋಮೇಶ್ವರನೂ ಸಿಂಘಣನನ್ನು ಓಡಿಸುವ ಪ್ರಯತ್ನ ಮಾಡಿದ. ಈ ಪ್ರಯತ್ನ ಹೆಚ್ಚು ಫಲಕಾರಿಯಾಗಲಿಲ್ಲ.

	ಒಂದು ಕಡೆ ಹೊಯ್ಸಳರ ಮೇಲೆ ದಂಡಯಾತ್ರೆ ನಡೆಸುತ್ತಿದ್ದರೂ ಅದೇ ಸಮಯದಲ್ಲಿ ಸಿಂಘಣ ಉತ್ತರ ಭಾರತದ ಕಡೆ ವಿಜಯಕ್ಕೆ ಏರ್ಪಾಟು ನಡೆಸುತ್ತಿದ್ದ. ಮೊದಲಿಗೆ ಮಾಳ್ವ ದೇಶಕ್ಕೆ ನುಗ್ಗಿ ಪರಮಾರ ರಾಜ ಸುಭಟವರ್ಮನನ್ನು ಕೊಂದು ಅನಂತರ ಯುದ್ಧವನ್ನು ಮುಂದುವರಿ ಸಿದ. ಸುಭಟವರ್ಮನ ಮಗ ಅರ್ಜುನವರ್ಮನೂ ಸೋತ. ಅನಂತರ ಸಿಂಘಣ ಲಾಟ ರಾಜ್ಯದ ಮೇಲೆ ಮುಂದುವರಿದ. ಚಾಹಮಾನ ಸಿಂಹ, ಶಂಖ ಮತ್ತು ಚೌಳುಕ್ಯ ಭೀಮನ ಸೈನ್ಯಗಳು ಸಿಂಘಣನನ್ನು ಎದುರಿಸಿದವು. ಇವನಿಗೆ ಜಯವಾಗಲಿಲ್ಲ; ಹಿಂದಿರುಗಿದ. ಈ ಘಟನೆಗಳು ನಡೆದದ್ದು ಸು. 1210ರಲ್ಲಿ.

	ಅನಂತರ ಸಿಂಘಣ ಸುಮಾರು 1213ರಲ್ಲಿ ಶಿಲಾಹಾರ ಎರಡನೆಯ ಭೋಜನನ್ನು ಸೋಲಿಸಿದ. ಆತ ಸೋತು ಕೊಲ್ಲಾಪುರದಿಂದ ಪನ್ಹಾಲ ಎಂಬಲ್ಲಿಗೆ ಓಡಿಹೋದ. ಅಲ್ಲಿಗೂ ಬೆನ್ನಟ್ಟಿಹೋದ ಸೇವುಣ ಸೈನ್ಯ ಭೋಜನನ್ನು ಸೋಲಿಸಿ ಕೊಲ್ಲಾಪುರವನ್ನು ವಶಮಾಡಿಕೊಂಡಿತು. ಅಲ್ಲಿಂದ ಸಿಂಘಣನ ಸೈನ್ಯ ಕೊಂಕಣದ ಕಡೆ ತಿರುಗಿ ಕೇಶಿರಾಜನನ್ನು ಸೋಲಿಸಿ ಅವನನ್ನು ಸಾಮಂತನನ್ನಾಗಿ ಮಾಡಿತು. ಸಿಂಘಣ ಹಿಂದೆ ಒಂದು ಬಾರಿ ಲಾಟದೇಶದ ಮೇಲೆ ದಂಡೆತ್ತಿಹೋಗಿ ವಿಫಲನಾಗಿದ್ದ. ಈ ಬಾರಿ ಸಫಲನಾಗುವ ಆಸೆ ಹೊತ್ತು ಅತ್ಯಂತ ಸಮರ್ಥನಾದ ಖೋಲೇಶ್ವರ ಎಂಬ ದಂಡನಾಯಕನ ನೇತೃತ್ವದಲ್ಲಿ ಸಿಂಘಣನ ಸೈನ್ಯ ಲಾಟದೇಶಕ್ಕೆ ನುಗ್ಗಿತು. ಯುದ್ಧದಲ್ಲಿ ಸಿಂಹನೂ ಅವನ ಸಹೋದರ ಸಿಂಧುರಾಜನೂ ಕೊಲ್ಲಲ್ಪಟ್ಟರು. ಶಂಖ ಸೆರೆಸಿಕ್ಕಿದ. ಖೋಲೇಶ್ವರ ಬ್ರೋಚ್ ನಗರವನ್ನು ತನ್ನ ವಶಮಾಡಿಕೊಂಡು ವಿಜಯಸ್ತಂಭವನ್ನು ಸ್ಥಾಪಿಸಿದ. ಸೆರೆಯಿಂದ ಶಂಖನನ್ನು ಬಿಡಿಸಿ ರಾಜ್ಯವನ್ನು ಅವನಿಗೆ ಹಿಂದಿರುಗಿಸಿದ. ಅಲ್ಲಿಂದ ಮುಂದೆ ಸಿಂಘಣ ಚಾಳುಕ್ಯ ರಾಜ್ಯಕ್ಕೆ ನುಗ್ಗಿದ. ಲವಣಪ್ರಸಾದ ನಿಗೂ ಇವನಿಗೂ ಸಂಧಿಯಾಯಿತು. ಅನಂತರ ಇವನು ಹಿಂದಿರುಗಿದ.

	ಈ ಕಡೆ ಸಿಂಘಣನ ದಂಡನಾಯಕರು ಸಣ್ಣಪುಟ್ಟ ರಾಜರುಗಳನ್ನು ಸೋಲಿಸುತ್ತಿದ್ದರು. ಸು. 1239ರಲ್ಲಿ ಕದಂಬ ಮಲ್ಲಿದೇವ ಸೋತ. ಗುತ್ತವೊಳಲಿನ ಜೋಯಿದೇವ ಸಾಮಂತನಾದ. ಸಿಂಘಣನ ಸೈನ್ಯಾಧಿಪತಿ ಬೀಚಣನು ರಟ್ಟರಾಜ ಲಕ್ಷ್ಮೀದೇವನನ್ನು ಸೋಲಿಸಿದ. ಬೆಳಗುತ್ತಿಯ ಮತ್ತು ಯಲಬುರ್ಗಿಯ ಸಿಂದರೂ ಸೋತು ಸಾಮಂತರಾದರು. ಅನಂತರ ಸೇವುಣ ಸೈನ್ಯ ತೆಲುಗು ಚೋಳರನ್ನು ಸೋಲಿಸಿತು. 1240ರಲ್ಲಿ ಸಿಂಘಣನ ಸೈನ್ಯಾಧಿಪತಿಯಾದ ರಾಮ ಮತ್ಮೊಮ್ಮೆ ಲಾಟದೇಶಕ್ಕೆ ನುಗ್ಗಿದ. ನರ್ಮದಾ ನದಿಯನ್ನು ದಾಟಿದ ಸೇವುಣನ ಸೈನ್ಯವನ್ನು ವೀರಧವಳನ ಮಗನಾದ ವೀಸಲದೇವ ತಡೆದು ರಾಮನನ್ನು ಕೊಂದ. ಸಿಂಘಣನ ರಾಜ್ಯ ದಕ್ಷಿಣಾಪಥದ ಬಹುಭಾಗಗಳನ್ನು ಒಳಗೊಂಡಿತ್ತು. ಉತ್ತರದಲ್ಲಿ ನರ್ಮದಾ ತೀರದವರೆಗೂ ದಕ್ಷಿಣದಲ್ಲಿ ಕಾವೇರಿಯವರೆಗೂ ಇವನು ವಿಜಯಯಾತ್ರೆಯನ್ನು ಕೈಗೊಂಡಿದ್ದ. ಪೂರ್ವದಲ್ಲಿ ಜಾಂದ ಜಿಲ್ಲೆಯವರೆಗೆ ಇವನ ರಾಜ್ಯ ಹಬ್ಬಿತ್ತು. ಆಂಧ್ರದ ಪಶ್ಚಿಮ ಭಾಗ ಎರಡು ದಶಕಗಳ ಕಾಲ ಇವನ ಆಳಿಕೆಗೆ ಸೇರಿದ್ದಿತು. ಇವನು ಶೂರ ಮಾತ್ರನಲ್ಲದೆ ಸಾಹಿತ್ಯ ಪ್ರಿಯನೂ ಆಗಿದ್ದ. ಸಂಗೀತಶಾಸ್ತ್ರಜ್ಞ ಶಾಙ್ರ್ಗದೇವ, ಕಮಲಭವ, ಖಗೋಳಶಾಸ್ತ್ರಜ್ಞ ಚಂಗದೇವ ಮತ್ತು ಅನಂತದೇವ ಇವನ ಆಶ್ರಯದಲ್ಲಿ ಇದ್ದರು. ಇವನಿಗೆ ಜೈತುಗಿ ಎಂಬ ಮಗನಿದ್ದ. ಇವನು ಸಿಂಘಣನಿಗಿಂತ ಮುಂಚೆಯೇ ಮರಣ ಹೊಂದಲು, ಇವನ ಮೊಮ್ಮಗನಾದ ಕೃಷ್ಣ 1247ರಲ್ಲಿ ದೊರೆಯಾದ.

	ಅಧಿಕಾರ ವಹಿಸಿಕೊಂಡ ಕೂಡಲೆ ಕೃಷ್ಣ ತನ್ನ ಗಮನವನ್ನು ಗುಜರಾತಿನ ಕಡೆಗೆ ಹರಿಸಿದ. ಮಾಳ್ವ ರಾಜ್ಯಕ್ಕೆ ನುಗ್ಗಿ ರಾಜನಾದ ಜೈತುಗಿದೇವನನ್ನು ಇವನು ಸೋಲಿಸಿರಬೇಕೆಂದು ಹೇಳಬಹುದು. ಅನಂತರ ಗುಜರಾತಿಗೆ ನಡೆದು ವೀರಧವಳನ ಮಗನಾದ ವೀಸಲದೇವನ ಸೈನ್ಯವನ್ನು ಸೋಲಿಸಿದ. ಇದಾದನಂತರ ತನ್ನ ಗಮನವನ್ನು ಹೊಯ್ಸಳರ ಕಡೆಗೆ ಹರಿಸಿದ. ಹೊಯ್ಸಳ ನಾರಸಿಂಹನು ಕೃಷ್ಣನನ್ನು ಎದುರಿಸುವಷ್ಟು ಸಮರ್ಥನಾಗಿರಲಿಲ್ಲ. ಇದರಿಂದ ಸೇವುಣ ಸೈನ್ಯ ಚಿತ್ರದುರ್ಗದ ಅನೇಕ ಭಾಗಗಳನ್ನು ತನ್ನ ವಶಮಾಡಿಕೊಂಡಿತು. ಕೃಷ್ಣನ ಸೇನಾಧಿಪತಿಗಳಾದ ಚಂಗದೇವ ಮತ್ತು ಕೇಶವದೇವ ಗೋವೆಯ ಕದಂಬರಾಜ ಷಷ್ಠರಾಜನನ್ನು ಸೋಲಿಸಿದರು. ಅವನು ಕೃಷ್ಣನ ಸಾಮಂತನಾದ. ಗುತ್ತವೊಳಲಿನ ಗುತ್ತರು ಕೃಷ್ಣನನ್ನು ಕಡೆಗಣಿಸಿದರು. ಮೂರನೆಯ ಗುತ್ತರಾಜನನ್ನು ಕೃಷ್ಣನ ಸೇನಾಧಿಪತಿಗಳು ಸೋಲಿಸಿದರು. ಅವನು 1259ರಲ್ಲಿ ಸಾಮಂತನಾಗಿ ಆಳುತ್ತಿದ್ದನೆಂಬುದು ತಿಳಿದುಬರುತ್ತದೆ. ಸಿಂದವಂಶದ ಬೀರದೇವನೂ ಸೋಲಿಸಲ್ಪಟ್ಟ. ಅವನ ರಾಜ್ಯ ಸೇವುಣ ರಾಜ್ಯದಲ್ಲಿ ಲೀನವಾಗಿ ಹೋಯಿತು. ಇದೇ ರೀತಿ ನಾಗರಸ ಸವದತ್ತಿಯ ರಟ್ಟರನ್ನು ಸೋಲಿಸಿ ಲಕ್ಷ್ಮೀದೇವ ಸಾಮಂತನಾಗುವಂತೆ ಮಾಡಿದ. ಕೃಷ್ಣನೂ ಕಾಕತೀಯ ಗಣಪತಿಯೂ ಮಿತ್ರರಾಗಿದ್ದರು. ಕೃಷ್ಣನ ರಾಜ್ಯ ವಿಸ್ತಾರವಾ ಗಿಯೇ ಇದ್ದಿತು. ದಕ್ಷಿಣದಲ್ಲಿ ನೊಳಂಬವಾಡಿ ಪ್ರದೇಶ ಸೇರಿಸಲ್ಪಟ್ಟಿತು. ಪೂರ್ವದಲ್ಲಿ ಚತ್ತೀಸ್‍ಘಡ್ ಇವನ ಆಳಿಕೆಗೆ ಸೇರಿತ್ತು. ಸೂಕ್ತಿಮುಕ್ತಾವಳಿ ಗ್ರಂಥದ ಕರ್ತೃ ಜಲ್ಹಣ, ಕಲ್ಪತರು ಗ್ರಂಥದ ಕರ್ತೃ ಅಮಲಾನಂದ ಮೊದಲಾದವರು ಕೃಷ್ಣನ ಆಸ್ಥಾನದಲ್ಲಿದ್ದರು. ಕೃಷ್ಣ ಮಹಾನುಭಾವ ಪಂಥದ ಗುರು ಚಕ್ರಧರನನ್ನು ಸಂದರ್ಶಿಸಿದ್ದ. ಇವನು 1261ರಲ್ಲಿ ಮರಣ ಹೊಂದಲು ಇವನ ಸಹೋದರನಾದ ಮಹಾದೇವ ರಾಜನಾದ

	ಕೃಷ್ಣನ ರಾಜ್ಯಭಾರ ಕಾಲದಲ್ಲಿ ಯುವರಾಜನಾಗಿದ್ದ ಮಹಾದೇವ ರಾಜನಾದ ಕೂಡಲೇ ಕೊಂಕಣದಲ್ಲಿ ಆಳುತ್ತಿದ್ದ ಶಿಲಾಹಾರ ರಾಜ ಸೋಮೇಶ್ವರನ ಮೇಲೆ ಯುದ್ಧಮಾಡಿ ಅವನನ್ನು ಸೋಲಿಸಿದ. ಅವನು ಸೋತು ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಮಹಾದೇವ ಅವನನ್ನು ಹಿಂಬಾಲಿಸಿ ನೌಕಾ ಯುದ್ಧದಲ್ಲಿ ಸೋಲಿಸಿದ. ಗುಜರಾತಿನ ವೀಸಲದೇವ ಮಹಾದೇವನ ಮೇಲೆ ಒಂದು ಸೈನ್ಯವನ್ನು ಕಳುಹಿಸಿದ. ಈ ಯುದ್ಧದಲ್ಲಿಯೂ ಮಹಾದೇವ ಜಯಶಾಲಿಯಾದ. ಮಹಾದೇವನ ಸಮಕಾಲೀನ ಕಾಕತೀಯ ರಾಣಿ ರುದ್ರಮದೇವಿಗೂ ಮಹಾದೇವನಿಗೂ ಯುದ್ಧಗಳಾದವು. ಈ ಯುದ್ಧಗಳಲ್ಲಿ ರುದ್ರಮದೇವಿ ಗೆದ್ದಳೆಂದು ತೆಲುಗು ಗ್ರಂಥಗಳು ತಿಳಿಸಿದರೆ, ಮಹಾದೇವನ ಶಾಸನಗಳು ಮಹಾದೇವನೇ ಜಯಶಾಲಿಯಾದನೆಂದು ತಿಳಿಸುತ್ತವೆ.

	ಮಹಾದೇವ ಹೊಯ್ಸಳರ ಮೇಲೆ ದಂಡೆತ್ತಿಹೋಗುವ ಮುನ್ನ 1270ರಲ್ಲಿ ಕದಂಬ ಕಾಮದೇವನನ್ನು ಸೋಲಿಸಿದ. ಅನಂತರ ಹೊಯ್ಸಳರ ಮೇಲೆ ದಂಡೆತ್ತಿಹೋದ. ಹೊಯ್ಸಳ ಶಾಸನಗಳ ಪ್ರಕಾರ ಮಹಾದೇವ ಸೋತು ಓಡಿಹೋದ. ರಟ್ಟರು ಮತ್ತು ಸಿಂದರು ಮಹಾದೇವನ ಸಾಮಂತರಾಗಿದ್ದರು. 1270ರಲ್ಲಿ ಮಹಾದೇವ ಮರಣಹೊಂದಲು ಇವನ ಮಗನಾದ ಆಮಣ ದೊರೆಯಾದ. ಆದರೆ ಕೆಲವೇ ತಿಂಗಳುಗಳಲ್ಲಿ ಕೃಷ್ಣನ ಮಗನಾದ ರಾಮಚಂದ್ರ ಇವನನ್ನು ಕೊಂದು ತಾನೇ ದೊರೆಯಾದನೆಂದು ಮಹಾನಳಭಾವ ಪಂಥದ ಗ್ರಂಥಗಳಿಂದ ತಿಳಿಯುತ್ತದೆ.

	1271ರಲ್ಲಿ ದೊರೆಯಾದ ರಾಮಚಂದ್ರ ಸೇವುಣವಂಶದ ಕೊನೆಯ ಪ್ರಖ್ಯಾತದೊರೆ. ಇವನು ದೊರೆಯಾದ ಕೂಡಲೆ ಮಾಳ್ವದೇಶಕ್ಕೆ ಹೋಗಿ ಪರಮಾರ ಅರ್ಜುನವರ್ಮನನ್ನು ಸೋಲಿಸಿದ. ಅನಂತರ ಗುಜರಾತಿಗೆ ಮುನ್ನಡೆದು ವಾಘೇಲರಾಜ ಅರ್ಜುನನನ್ನು ಸೋಲಿಸಿದ. ಅಲ್ಲಿಂದ ಹಿಂದಿರುಗಿ ಹೊಯ್ಸಳರ ಕಡೆಗೆ ತನ್ನ ಗಮನವನ್ನು ಹರಿಸಿದ. ಹೊಯ್ಸಳರು ಸೇವುಣ ಸಾಮಂತ ಕದಂಬ ಕಾಮದೇವನ ಮೇಲೆ ಯುದ್ಧ ಮಾಡಿದರು. ಕೂಡಲೇ ರಾಮಚಂದ್ರ ತನ್ನ ಸೇನಾಧಿಪತಿ ಸಾಳುವ ತಿಕ್ಕಮನನ್ನು ಯುದ್ಧಕ್ಕೆ ಕಳುಹಿಸಿದ. ತಿಕ್ಕಮ ಹೊಯ್ಸಳರನ್ನು ಸೋಲಿಸಿ ಕದಂಬರಿಗೆ ಒದಗಿದ್ದ ವಿಪತ್ತನ್ನು ತಪ್ಪಿಸಿದ. ಅನಂತರ ತಿಕ್ಕಮ ಸಾಂತರ ಬೊಮ್ಮರಸನನ್ನು ಸೋಲಿಸಿದ. ಅಲ್ಲಿಂದ ಮುಂದೆ ಗುತ್ತವೊಳಲಿಗೆ ಹೋಗಿ ಮೂರನೆಯ ಗುತ್ತನೊಡನೆ ಬೆಳವಾಡಿ ಕೋಟೆಗೆ ಮುತ್ತಿಗೆ ಹಾಕಿದ. ಈ ಯುದ್ಧದಲ್ಲಿ ಹೊಯ್ಸಳ ಸೇನಾಧಿಪತಿಗಳಾದ ನಂಜಯ್ಯ ಮತ್ತು ಗುಲ್ಲಯ್ಯ ತಿಕ್ಕಮನನ್ನು ಗಾಯಗೊಳಿಸಿದರು. ಅಲ್ಲಿಂದ ಮುಂದೆ ಹೋಗಲಾರದೆ ತಿಕ್ಕಮನ ಸೈನ್ಯ ಹಿಂದಿರುಗಿತು. 1296ರಲ್ಲಿ ಕಾಕತೀಯ ರಾಣಿ ರುದ್ರಮದೇವಿ ರಾಮಚಂದ್ರನನ್ನು ಸೋಲಿಸಿದಳು. ಹೀಗೆ ರಾಮಚಂದ್ರ ಯುದ್ಧನಿರತನಾಗಿದ್ದಾಗ ದೇವಗಿರಿಗೆ ಒಂದು ದೊಡ್ಡ ವಿಪತ್ತು ಬಂದೊದಗಿತ್ತು. ರಾಮಚಂದ್ರನ ಐಶ್ವರ್ಯದ ವಿಷಯವನ್ನು ಕೇಳಿದ್ದ ಅಲಾಉದ್ದೀನನು 1296 ಫೆಬ್ರವರಿ 26ರಂದು ದೇವಗಿರಿಗೆ ಮುತ್ತಿಗೆ ಹಾಕಿದ. ರಾಮಚಂದ್ರನ ಸಾಮಂತನಾದ ಕರ್ಣ ಅಲಾಉದ್ದೀನ ನನ್ನು ಎದುರಿಸಿ ಸೋತ. ರಾಮಚಂದ್ರ ಅಸಹಾಯಕತೆಯಿಂದ ಕೋಟೆಯೊಳಗೆ ಸೇರಿಕೊಂಡ. ಒಳಗಿದ್ದ ಆಹಾರ ಪದಾರ್ಥಗಳು ಮುಗಿಯುತ್ತ ಬಂದಿದ್ದವು. ಈ ಮಧ್ಯದಲ್ಲಿ ಅಲಾಉದ್ದೀನನು ಈಗಿನ ತನ್ನ ಸೈನ್ಯ ಕೇವಲ ಒಂದು ಭಾಗವೆಂದೂ ಇಪ್ಪತ್ತು ಸಾವಿರದ ಸೈನ್ಯ ಹಿಂದೆ ಬರುತ್ತಿದೆಯೆಂದೂ ಒಂದು ಸುಳ್ಳು ಸಮಾಚಾರವನ್ನು ಹಬ್ಬಿಸಿ ರಾಮಚಂದ್ರ ಈ ಸುದ್ದಿಯನ್ನು ನಂಬುವಂತೆ ಮಾಡಿದ. ಮೋಸಹೋದ ರಾಮಚಂದ್ರ ಮುಸ್ಲಿಂ ಸೈನ್ಯದೊಡನೆ ಹೋರಾಡುವುದು ಉಪಯೋಗವಿಲ್ಲ ವೆಂದು ಅಲಾಉದ್ದೀನನಿಗೆ ಶರಣಾಗತನಾದ. ಅನಂತರ ಏನಾಯಿತು ಎಂಬುದು ಸ್ಪಷ್ಟವಾಗಿ ತಿಳಿಯದು. ಮುಸ್ಲಿಂ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಇಸಾಮಿಯ ಪ್ರಕಾರ ರಾಮಚಂದ್ರನ ಮಗ ಸಿಂಘಣ ತನ್ನ ತಂದೆಯ ಮಾತನ್ನು ನಿರಾಕರಿಸಿ ಅಲಾಉದ್ದೀನನಿಗೆ ನಿನಗೆ ನಿನ್ನ ಪ್ರಾಣದ ಮೇಲೆ ಆಸೆ ಇದ್ದರೆ ನೀನು ಲೂಟಿಮಾಡಿರುವುದೆಲ್ಲವನ್ನೂ ಹಿಂದಿರುಗಿಸಿ, ತಪ್ಪಿಸಿಕೊಂಡು ಓಡಿಹೋಗುವುದು ನಿನ್ನ ಅದೃಷ್ಟವೆಂದು ಭಾವಿಸು ಎಂದು ತಿಳಿಸಿದ. ಇದರಿಂದ ಕೋಪಗೊಂಡ ಅಲಾಉದ್ದೀನ ಸಿಂಘಣನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ 600 ಮಣ ಮುತ್ತು, 1 ಮಣ ವಜ್ರ, 1 ಸಾವಿರ ಮಣ ಬೆಳ್ಳಿ, 4 ಸಾವಿರ ರೇಷ್ಮೆ ಬಟ್ಟೆ ಮತ್ತು ಎಲಿಚ್‍ಪುರದ ವಾರ್ಷಿಕ ಆದಾಯ ಇವುಗಳನ್ನು ತೆಗೆದುಕೊಂಡು ಹಿಂದಿರುಗಿದ. ಈ ಎರಡರಲ್ಲಿ ಯಾವುದು ಸರಿ ಎಂದು ಖಚಿತವಾಗಿ ತಿಳಿದಿಲ್ಲ.

	ರಾಮಚಂದ್ರ ಇಷ್ಟಾದರೂ ಬುದ್ಧಿಯನ್ನು ಕಲಿಯಲಿಲ್ಲ. ಮುಸ್ಲಿಮರನ್ನು ಸೋಲಿಸಲು ತನ್ನ ಸೈನ್ಯವನ್ನು ಬಲಪಡಿಸಿಕೊಳ್ಳುವ ಬದಲು 1303ರಲ್ಲಿ ಹೊಯ್ಸಳರ ಮೇಲೆ ದ್ವೇಷ ತೀರಿಸಿಕೊಳ್ಳಲು ನಿಂತ. ಹೊಳಲ್ಕೆರೆಯಲ್ಲಿ ಆ ವರ್ಷ ಹೊಯ್ಸಳರಿಗೂ ಸೇವುಣರಿಗೂ ಯುದ್ಧವಾಯಿತು. ಇವನಿಗೆ ಜಯ ಲಭಿಸಲಿಲ್ಲ. ಸ್ವಲ್ಪಕಾಲದ ವರೆಗೆ ಇವನು ಅಲಾಉದ್ದೀನನಿಗೆ ವಿಧೇಯನಾಗಿ ನಡೆದುಕೊಂಡ. 1306ರ ವೇಳೆಗೆ ತಾನು ಕಳುಹಿಸಬೇಕಾದ ಕಾಣಿಕೆಯನ್ನು ನಿಲ್ಲಿಸಿದ. ಇದರಿಂದ ಕುಪಿತನಾದ ಅಲಾಉದ್ದೀನ ಮಲಿಕ್‍ಕಾಫರ್‍ನನ್ನು ದೇವಗಿರಿಗೆ ಕಳುಹಿಸಿದ. ಅಲ್ಫ್‍ಖಾನನ ಸಹಾಯದಿಂದ ಮಲಿಕ್‍ಕಾಫರನು ಹಿಂದು ಸೈನ್ಯವನ್ನು 1307 ಮಾರ್ಚ್ 24ರಂದು ಸೋಲಿಸಿದ. ಇವನು ಶರಣಾಗತನಾದ. ಇವನ ಮಕ್ಕಳು ಓಡಿಹೋದರು. ಇವನು ಕೈದಿಯಂತೆ ದೆಹಲಿಗೆ ಒಯ್ಯಲ್ಪಟ್ಟ. ಅಲಾಉದ್ದೀನನು ಇವನನ್ನು ಬಹು ಮಾರ್ಯಾದೆಯಿಂದ ಬರಮಾಡಿಕೊಂಡು ಬಹುಮಾನಗಳೊಡನೆ ವಾಪಸ್ ಕಳುಹಿಸಿದ. 1309ರಲ್ಲಿ ಅಲಾಉದ್ದೀನನ ಸೈನ್ಯ ಓರಂಗಲ್ಲಿಗೆ ಹೋಗುವ ಮಾರ್ಗದಲ್ಲಿ ದೇವಗಿರಿಯಲ್ಲಿ ತಂಗಿತು. ಇವನು ಅದಕ್ಕೆ ತಕ್ಕ ಅನುಕೂಲತೆಗಳನ್ನು ಮಾಡಿಕೊಟ್ಟು ಓರಂಗಲ್ಲಿಗೆ ದಾರಿ ತೋರಿಸಲು ದಳವಾಯಿ ಪರಶುರಾಮ ನನ್ನು ಕಳುಹಿಸಿದ. ಈ ರೀತಿ ಇವನು ಸುಲ್ತಾನನಿಗೆ ವಿಧೇಯನಾಗಿ ನಡೆದುಕೊಂಡ.

	ರಾಮಚಂದ್ರ ಮರಾಠಿ ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟ. ಮಹಾನಳಭಾವ ಪಂಥದ ಅನೇಕ ಗ್ರಂಥಗಳು ಇವನ ಕಾಲದಲ್ಲಿ ರಚಿತವಾದವು. ಇವನು 1312ರಲ್ಲಿ ಮರಣಹೊಂದಲು ಇವನ ಮಗ ಮೂರನೆಯ ಸಿಂಘಣ ರಾಜನಾದ. ಇವನನ್ನು ಹಿಂದಿನ ಇತಿಹಾಸಕಾರರು ಸಂಗಮ, ಶಂಕರ ಎಂಬ ಹೆಸರಿನಿಂದ ಕರೆದಿದ್ದರು. ಸಿಂಘಣನಿಗೂ ದೇವಲದೇವಿಗೂ ಇದ್ದ ಪ್ರೇಮದ ವಿಷಯದಲ್ಲಿ ಅಮೀರ್ ಖುಸ್ರು ಒಂದು ಕಾವ್ಯವನ್ನೇ ರಚಿಸಿದ್ದಾನೆ. ಇದು ಎಷ್ಟರಮಟ್ಟಿಗೆ ಚರಿತ್ರಾರ್ಹವೆಂದು ಹೇಳುವುದು ಕಷ್ಟ. ತಾನು ಪ್ರೇಮಿಸಿದ್ದ ದೇವಲದೇವಿಯನ್ನು ಅಲಾಉದ್ದೀನನು ಅಪಹರಿಸಿದ್ದುದು ಸಿಂಘಣ ಅಲಾಉದ್ದೀನನನ್ನು ದ್ವೇಷಿಸಲು ಕಾರಣಗಳಿರಬಹುದು. ಅಲಾಉದ್ದೀನನಿಗೆ ಕೊಡಬೇಕಾದ ಕಪ್ಪಕಾಣಿಕೆಗಳನ್ನು ನಿಲ್ಲಿಸಿದ್ದರಿಂದ ಕೋಪಗೊಂಡ ಮಲಿಕಾಫರನು ಮತ್ತೆ (ಮೂರನೆಯ ಸಾರಿ) ದೇವಗಿರಿಗೆ ಬಂದು ಸಿಂಘಣನನ್ನು ಸೋಲಿಸಿ ಅವನನ್ನು ಅಮಾನುಷ ರೀತಿಯಲ್ಲಿ ಕೊಲ್ಲಿಸಿದ. ದೇವಗಿರಿ ಮಹಮ್ಮದೀಯರ ವಶವಾಯಿತು. 1316ರಲ್ಲಿ ಅಲಾಉದ್ದೀನನು ಮರಣಹೊಂದಲು, ಮಲಿಕಾಫರನು ದೇವಗಿರಿಯಿಂದ ಮುಸ್ಲಿಂ ಗವರ್ನರ್ ಐನ್ ಉಲ್‍ಮುಲ್ಕನನ್ನು ಹಿಂದಕ್ಕೆ ಕರೆಯಿಸಿಕೊಂಡ. ದೇವಗಿರಿಯಲ್ಲಿ ಮುಸ್ಲಿಂ ಗವರ್ನರ್ ಇಲ್ಲದಿರುವುದನ್ನು ಗಮನಿಸಿದ ರಾಮಚಂದ್ರನ ಅಳಿಯನಾದ ಹರಪಾಲದೇವ ತನ್ನ ಮಂತ್ರಿ ರಾಘವನ ಸಹಾಯದಿಂದ ದೇವಗಿರಿಯನ್ನು ತನ್ನ ವಶಪಡಿಸಿಕೊಂಡ. ಖುಸ್ರುಖಾನನು ಕೂಡಲೇ ಹಿಂದಿರುಗಿ 1318ರಲ್ಲಿ ಹರಪಾಲನನ್ನು ಸೋಲಿಸಿ ಅವನನ್ನು ಜೀವಸಹಿತ ಸುಡಿಸಿ ಅವನ ತಲೆ ಬುರುಡೆಯನ್ನು ದೇವಗಿರಿಯ ಕೋಟೆಯ ಮೇಲೆ ನೇತುಹಾಕಿಸಿದ ಎಂದು ಫೆರಿಸ್ತ ಹೇಳುತ್ತಾನೆ. ಅನಂತರ ಮಲ್ಲಿಕ್ ಯಾಖ್‍ಲಾಖಿ ದೇವಗಿರಿಯ ರಾಜ್ಯಪಾಲನಾದ. 1333-34ರ ಶಾಸನವೊಂದರಲ್ಲಿ ಸೇವುಣ ವಂಶದ ಮೇಲುಗಿದೇವನ ಪ್ರಸ್ತಾಪವಿದೆ. ಇವನು ಮುಸ್ಲಿಮರ ಅಧೀನದಲ್ಲಿ ಆಳುತ್ತಿದ್ದಿರಬಹುದೆಂದು ಊಹಿಸಲಾಗಿದೆ. ಅನಂತರ ಸೇವುಣರ ವಿಷಯ ತಿಳಿದು ಬರುವುದಿಲ್ಲ.		(ಎ.ವಿ.ಎನ್.)

	ಆಡಳಿತ ವ್ಯವಸ್ಥೆ: ಕೆಲವು ಶತಮಾನಗಳ ಕಾಲ ರಾಷ್ಟ್ರಕೂಟ ಮತ್ತು ಕಲ್ಯಾಣದ ಚಾಳುಕ್ಯರ ಸಾಮಂತರಾಗಿದ್ದ ಸೇವುಣರು ತಾವು ಪರಮಾಧಿಕಾರ ಪಡೆದಮೇಲೂ ಹಿಂದಿನ ಆಡಳಿತ ವ್ಯವಸ್ಥೆಯ ಮೂಲಸ್ವರೂಪವನ್ನೇ ಮುಂದುವರಿಸಿಕೊಂಡು ಬಂದರು. ಇವರ ಆಡಳಿತ ಕ್ರಮದಲ್ಲಿ ಇವರ ಸಮಕಾಲೀನ ಸ್ಥಿತಿಗನುಗುಣವಾಗಿ ರಾಜನು ರಾಜ್ಯದ ಮುಖ್ಯನೂ ನಿರಂಕುಶನೂ ಆಗಿದ್ದ. ಇವನು ವಿವಿಧ ಬಿರುದುಗಳನ್ನು ಧರಿಸುತ್ತಿದ್ದ. ರಾಜನಿಗೆ ರಾಜಗುರುಗಳು ಇರುತ್ತಿದ್ದರು. ಅವರ ಸಲಹೆಗೆ ಮಾನ್ಯತೆ ಇತ್ತು.

	ರಾಜನು ಜ್ಯೇಷ್ಠಪುತ್ರನನ್ನು ಯುವರಾಜನನ್ನಾಗಿ ನೇಮಿಸುತ್ತಿದ್ದ. ಈತ ರಾಜನ ಮರಣಾನಂತರ ಉತ್ತರಾಧಿಕಾರಿಯಾಗುತ್ತಿದ್ದ. ಉತ್ತರಾಧಿಕಾರಿ ಅಸಮರ್ಥನಾಗಿದ್ದಾಗ ಅಥವಾ ರಾಜನಿಗೆ ಗಂಡು ಮಕ್ಕಳಿಲ್ಲದಾಗ ಎರಡನೆಯ ಮಗ ಅಥವಾ ತಮ್ಮಂದಿರು ಸಿಂಹಾಸನ ಏರಿರುವ ಪ್ರಕರಣಗಳೂ ಉಂಟು. ರಾಜ ನಿರಂಕುಶನಾಗಿದ್ದರೂ ಇವನ ಸಹಾಯಕ್ಕೆ ಮಂತ್ರಿಮಂಡಲವಿರುತ್ತಿತ್ತು. ಆಡಳಿತ ವಿಷಯಗಳಲ್ಲಿ ಮಂತ್ರಿಮಂಡಲದ ಸಲಹೆ ಕೇಳುವುದು ಪರಿಪಾಠವಾಗಿತ್ತು. ಮಹಾಮಾತ್ಯ, ಮಹಾಪ್ರಧಾನಿ, ಸಂಧಿವಿಗ್ರಹಿ, ಕೋಶಾಧ್ಯಕ್ಷ ಶ್ರೀಕರಣಾಧಿಪ, ಮಹತ್ತಮ, ರಾಜಾಧ್ಯಕ್ಷ, ಅಪಾಯಿಕ ಮೊದಲಾದ ಮಂತ್ರಿಗಳ ಮತ್ತು ಉನ್ನತಾಧಿಕಾರಿಗಳ ಹುದ್ದೆಗಳ ಹೆಸರುಗಳು ಕಂಡುಬರುತ್ತವೆ. ಮಹಾಮಾತ್ಯ ಕಂದಾಯ ಸಚಿವನಾಗಿದ್ದನೆಂದು ಅಭಿಪ್ರಾಯವಿದೆ. ಆದರೆ ಇವನೇ ಮುಖ್ಯಮಂತ್ರಿ ಆಗಿದ್ದಿರಬೇಕು. ಪ್ರಾಂತ ಮತ್ತು ಜಿಲ್ಲೆಯ ಅಧಿಕಾರಿಗಳನ್ನು ಮಹಾಪ್ರಧಾನರೆಂದು ಕರೆಯಲಾಗುತ್ತಿತ್ತು. ಕೆಲವು ವಿದ್ವಾಂಸರು ಮಹಾಪ್ರಧಾನನನ್ನು ಪ್ರಧಾನಮಂತ್ರಿ ಎಂದು ಭಾವಿಸಿದ್ದಾರೆ. ಆದರೆ ಆಗಿನ ಶಾಸನಗಳಿಂದ ಅವರು ಅಧಿಕಾರಿಗಳಾಗಿ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದು ತಿಳಿದು ಬರುವುದರಿಂದ ಈ ಅಂಶ ದೃಢಪಡುವುದಿಲ್ಲ. ಸರ್ವಾಧಿಕಾರಿ ಎಂಬ ಇನ್ನೊಂದು ವರಿಷ್ಠ ಹುದ್ದೆಯೂ ಇತ್ತು. ಈ ಅಧಿಕಾರಿಗಳನ್ನು ರಾಜನು ನೇಮಿಸುತ್ತಿದ್ದ. ಕೆಲವೊಮ್ಮೆ ಆನುವಂಶಿಕವಾಗಿಯೂ ಈ ಹುದ್ದೆಗಳು ದೊರೆಯುತ್ತಿದ್ದವು.

	ಸೇವುಣರಿಗೆ ಅನೇಕ ಮನ್ನೆಯರು ಅಥವಾ ಸಾಮಂತರಿದ್ದರು. ವಾರ್ಷಿಕ ಕಪ್ಪಕಾಣಿಕೆಗಳನ್ನು ಕೊಡುವುದು, ಯುದ್ಧಕಾಲದಲ್ಲಿ ಸೈನ್ಯವನ್ನು ಒದಗಿಸುವುದು, ಚಕ್ರವರ್ತಿಗೆ ಸಂಬಂಧಿಸಿದಂತೆ ಅವರ ಮುಖ್ಯ ಕರ್ತವ್ಯಗಳಾಗಿದ್ದವು. ಅವರವರ ಪ್ರದೇಶಗಳಲ್ಲಿ ಶಾಂತಿ, ಶಿಸ್ತು ವ್ಯವಸ್ಥೆ ಮಾಡಬೇಕಾಗಿತ್ತು. ಈ ಸಾಮಂತರಲ್ಲಿ ಶ್ರೇಷ್ಠರೆನಿಸಿದವರನ್ನು ಅಥವಾ ಬಲಿಷ್ಠರೆನಿಸಿದವರನ್ನು ಚಕ್ರವರ್ತಿಯು ಮಹಾಮಂಡಲೇಶ್ವರರೆಂದು ಮಾನ್ಯ ಮಾಡುತ್ತಿದ್ದ. ಸಾಮಂತರ ರಾಜಧಾನಿಯಲ್ಲಿ ಚಕ್ರವರ್ತಿಯ ಪ್ರತಿನಿಧಿಗಳಾಗಿ ಮಹಾಪ್ರಧಾನರಿರುತ್ತಿದ್ದರು.

	ಸಾಮ್ರಾಜ್ಯವನ್ನು ವಿಷಯ ಅಥವಾ ಪ್ರಾಂತಗಳಾಗಿ ವಿಂಗಡಿಸಲಾಗಿತ್ತು. ದೇಶವೆಂಬ ಆಡಳಿತ ವಿಭಾಗವಿತ್ತೆಂಬ ಅಭಿಪ್ರಾಯವಿದೆ. ಆದರೆ ದೇಶದ ವ್ಯಾಪ್ತಿಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ವಿಷಯವನ್ನು ನಾಡು ಮತ್ತು ಕಂಪಣಗಳಾಗಿ ವಿಭಜಿಸಲಾಗಿತ್ತು. ನಾಡುಗಳಲ್ಲಿ ಮಹಾನಾಡು ಮತ್ತು ನಾಡುಗಳೆಂಬ ವರ್ಗಗಳಿದ್ದುವು. ನಾಡಿಗೆ ನಾಡಗೌಡ, ನಾಡಪ್ರಭು, ನಾಡಹೆಗ್ಗಡೆ ಮೊದಲಾದ ಮುಖ್ಯಾಧಿಕಾರಿಗಳಿರುತ್ತಿದ್ದರು. ಸೇನಬೋವ ಎಂಬ ಲೆಕ್ಕಾಧಿಕಾರಿ ನಾಡಗೌಡನ ಸಹಾಯಕನಾಗಿದ್ದ. ನಾಡಿನಲ್ಲಿ ಪಟ್ಟಣಗಳೂ ಗ್ರಾಮಗಳೂ ಇದ್ದವು. ಪಟ್ಟಣಕ್ಕೆ ಪಟ್ಟಣಸ್ವಾಮಿ ಎಂಬುವನು ಮುಖ್ಯನಾಗಿರುತ್ತಿದ್ದ, ಗೌಡ, ಪ್ರಭು, ಹೆಗ್ಗಡೆ ಮೊದಲಾದ ವರು ಗ್ರಾಮಾಧಿಕಾರಿಗಳಾಗಿದ್ದರು. ಪಟ್ಟಣಸಭೆ ಮತ್ತು ಗ್ರಾಮಸಭೆಗಳು ಅಸ್ತಿತ್ವದಲ್ಲಿದ್ದವು. ಅಗ್ರಹಾರಗಳಲ್ಲಿ ಮಹಾಜನಸಭೆಗಳಿರುತ್ತಿದ್ದವು.

	ತೆರಿಗೆಗಳ ವಸೂಲಿಗೆ ಸುಂಕಾಧಿಕಾರಿ ಅಥವಾ ಸುಂಕದ ಹೆಗ್ಗಡೆ ಎಂಬ ಅಧಿಕಾರಿಗಳಿರುತ್ತಿದ್ದರು. ಶುಲ್ಕಾಧ್ಯಕ್ಷ, ಸುಂಕಾಧಿಕಾರಿ, ಸುಂಕವೆರ್ಗಡೆ ಮೊದಲಾದ ಅಧಿಕಾರ ಹುದ್ದೆಗಳಿದ್ದವು. ಕಟ್ಟಾಳಿ, ಕುರುವಣಿಗೆ, ಹೆಜ್ಜಂಕ, ಕಿರುಕುಳ ಮೊದಲಾದ ಸುಂಕಪದ್ಧತಿಗಳಿದ್ದವು.

	ಆರ್ಥಿಕ-ಸಾಮಾಜಿಕ ಸ್ಥಿತಿ: ಸೇವುಣರ ಸಾಮ್ರಾಜ್ಯದ ಆರ್ಥಿಕತೆಯ ಮುಖ್ಯ ಆಧಾರ ವ್ಯವಸಾಯ. ಜನತೆ ಬಹುಪಾಲು ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಉಪಕಸಬುಗಳನ್ನು ಜೀವನೋಪಾಯಕ್ಕಾಗಿ ಅವಲಂಬಿಸಿತ್ತು. ಬತ್ತ, ಗೋದಿ, ಧಾನ್ಯಗಳು, ಎಣ್ಣೆಬೀಜಗಳು ಮುಖ್ಯ ಬೆಳೆಗಳಾಗಿದ್ದವು. ತೆಂಗು, ಅಡಕೆ, ವೀಳೆಯದೆಲೆ, ನಿಂಬೆ, ಮಾವು, ಸೇಬು, ದ್ರಾಕ್ಷಿ ಮೊದಲಾದ ತೋಟದ ಬೆಳೆಗಳಿದ್ದವು. ಹತ್ತಿ, ಮೆಣಸು, ಏಲಕ್ಕಿ, ಶುಂಠಿ ಮೊದಲಾದ ವಾಣಿಜ್ಯ ಬೆಳೆಗಳಿದ್ದವು.

	ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಿ ಉತ್ಪನ್ನ ಹೆಚ್ಚಿಸಲು ಸರ್ಕಾರದಿಂದ ಪ್ರೋತ್ಸಾಹ ದೊರೆಯುತ್ತಿತ್ತು. ರಾಜರು, ಸಾಮಂತರು, ಅಧಿಕಾರಿಗಳು, ವಣಿಕರು, ಧನಿಕರು, ತಮ್ಮ ಹೆಸರುಗಳಲ್ಲಿ ಕೆರೆಗಳನ್ನು ಕಟ್ಟಿಸುತ್ತಿದ್ದರು, ಕಾಲುವೆಗಳನ್ನು ತೋಡಿಸುತ್ತಿದ್ದರು. ರೈತರ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಗೇಣಿಪದ್ಧತಿ ಇತ್ತು. ಶ್ರೀಮಂತ ಭೂಮಾಲೀಕರು, ಜಹಾಗೀರದಾರರು ರೈತರನ್ನು ಶೋಷಿಸುತ್ತಿದ್ದರು. ಯುದ್ಧಕಾಲದ ಕೊಳ್ಳೆಗೆ, ಅಧಿಕಾರಿಗಳ ಕಿರುಕುಳಕ್ಕೆ ಜನಸಾಮಾನ್ಯರೇ ಈಡಾಗುತ್ತಿದ್ದರು. ಅಗ್ರಹಾರಗಳಾಗಿ ಬ್ರಾಹ್ಮಣರಿಗೆ ಅಧ್ಯಯನ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಭೂಮಿಯನ್ನು ದತ್ತಿ ನೀಡಲಾಗುತ್ತಿತ್ತು. ವ್ಯವಸಾಯ ಜಮೀನಿನ ಮೇಲೆ ವಿಧಿಸಲಾಗುತ್ತಿದ್ದ ಕಂದಾಯ ರಾಜ್ಯಾದಾಯದ ಬಹುದೊಡ್ಡ ಭಾಗವಾಗಿತ್ತು.

	ಹತ್ತಿಬಟ್ಟೆ ನೇಯುವುದು, ಚರ್ಮ ಹದ ಮಾಡುವುದು, ಚಾಪೆ ನೇಯುವುದು, ಬುಟ್ಟಿ ಹೆಣೆಯುವುದು, ವ್ಯವಸಾಯ ಉಪಕರಣಗಳನ್ನು ತಯಾರಿಸುವುದು ಮೊದಲಾದವಕ್ಕೆ ಸಂಬಂಧಿಸಿದ ಉದ್ಯಮಗಳಿದ್ದವು. ಗಾಣದಿಂದ ಎಣ್ಣೆ ತೆಗೆಯುವುದು, ಬಟ್ಟೆ ಹೊಲಿಯುವುದು ಮೊದಲಾದ ಕಸಬುಗಳಿದ್ದವು. ಗಣಿಗಾರಿಕೆ, ಲೋಹದ ಪಾತ್ರೆಗಳ ತಯಾರಿಕೆ ನಡೆಯುತ್ತಿತ್ತು. ರತ್ನಗಳು, ಹವಳ, ವಜ್ರ, ವೈಡೂರ್ಯಗಳಿಗೆ ದಖನ್ ಪ್ರಸಿದ್ಧವಾಗಿತ್ತು. ಕಲಾವಸ್ತುಗಳು ಮತ್ತು ಆಭರಣಗಳ ತಯಾರಿಕೆ ಕುಶಲಕರ್ಮಿಗಳ ಮಾಧ್ಯಮವಾಗಿದ್ದವು. ದೇವಾಲಯಗಳನ್ನು ಕಟ್ಟಲು ಶಿಲ್ಪಿಗಳ ಪಡೆಯೇ ಇತ್ತು.

	ವ್ಯಾಪಾರ ಸಂಘಗಳು ಸುಸ್ಥಿತಿಯಲ್ಲಿದ್ದವು. ಅವು ದೇಶವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಿದ್ದವು. ಅಂತಹ ಸಂಘಗಳಲ್ಲಿ ಐಯ್ಯಾವೊಳೆ ಐನೂರ್ವರು ಎಂಬುದು ಪ್ರಸಿದ್ಧವಾಗಿತ್ತು. ಇವರು ಮತ್ತು ದಕ್ಷಿಣ ಭಾರತದಲ್ಲಿ ಪ್ರಸಿದ್ಧರಾಗಿದ್ದ ನಾನಾದೇಶಿಗಳು, ನೇಪಾಲ, ಕಾಂಬೋಜ, ಮಲಯ, ಸಿಂಹಳ ಮೊದಲಾದ ದೇಶಗಳಿಗೆ ಹೋಗಿ ವ್ಯಾಪಾರ ನಡೆಸುತ್ತಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಇವರನ್ನು ವೀರಬಣಜಿಗರೆಂದೂ ಕರೆಯಲಾಗುತ್ತಿತ್ತು. ದ್ವಾರಾವತಿ, ಬಳಿಗಾಮೆ, ಐಹೊಳೆ, ಕೊಲ್ಲಾಪುರ, ದೇವಗಿರಿ, ವಾರಂಗಲ್ಲು, ಕಾಂಚಿಪುರ, ಮಧುರೆ ಮೊದಲಾದ ಸ್ಥಳಗಳು ಇವರ ಚಟುವಟಿಕೆಯ ಕೇಂದ್ರಗಳಾಗಿದ್ದವು.

	ಇವರ ವ್ಯಾಪಾರ ವಸ್ತುಗಳಲ್ಲಿ ರತ್ನ, ವಜ್ರವೈಡೂರ್ಯಗಳ ಜೊತೆಗೆ ಆನೆಗಳು, ಕುದುರೆಗಳು, ಸಂಬಾರ ಪದಾರ್ಥಗಳು, ಚಂದನ, ಕರ್ಪೂರ, ದಂತ, ಸುಗಂಧ ವಸ್ತುಗಳು ಮೊದಲಾದವು ಸೇರಿದ್ದವು. ಅರೇಬಿಯ ಮತ್ತು ಚೀನ, ದಖನ್ನಿನೊಂದಿಗೆ ನಿಕಟ ವ್ಯಾಪಾರ ಸಂಬಂಧವಿಟ್ಟು ಕೊಂಡಿದ್ದುದು ಪ್ರವಾಸಿಗರ ಕಥನಗಳಿಂದ ತಿಳಿದುಬರುತ್ತದೆ. ದಖನ್‍ನ ಮಸ್ಲಿನ್ ಬಟ್ಟೆ, ದಂತ, ವಜ್ರಗಳು, ಸುಗಂಧ ವಸ್ತುಗಳು, ಸಂಬಾರ ವಸ್ತುಗಳನ್ನು ಕೊಳ್ಳಲು ವಿದೇಶಗಳಿಂದ ವ್ಯಾಪಾರಿಗಳ ಸಮೂಹವೇ ಬರುತ್ತಿತ್ತು.

	ಇವರ ಕಾಲದಲ್ಲಿ ರಾಜಭಂಡಾರದಲ್ಲಿ, ಶ್ರೀಮಂತರಲ್ಲಿ ಅಪಾರ ಐಶ್ವರ್ಯವಿತ್ತು. ಅಲಾಉದ್ದೀನನು ಸೇವುಣರನ್ನು ಸೋಲಿಸಿದಾಗ ಅವನಿಗೆ ಒಪ್ಪಿಸಿದ ಬಂಗಾರ, ವಜ್ರವೈಡೂರ್ಯಗಳ ರಾಶಿಯೇ ಇದಕ್ಕೆ ಸಾಕ್ಷಿ. ಆಹಾರ ಮತ್ತು ಅಗತ್ಯ ವಸ್ತುಗಳಲ್ಲಿ ದೇಶ ಸ್ವಾವಲಂಬಿಯಾಗಿದ್ದು ಸಾಮಾನ್ಯರೂ ಸಮಾಧಾನದಿಂದ ಬದುಕುತ್ತಿದ್ದರು.

	ವಾಸ್ತು-ಶಿಲ್ಪ: ಇವರ ವಾಸ್ತುಶಿಲ್ಪ ಕೆಲವೊಂದು ವ್ಯತ್ಯಾಸಗಳೊಂ ದಿಗೆ ದಖನ್ನಿನ ಚಾಳುಕ್ಯ ಶೈಲಿಯ ಮುಂದುವರಿಕೆಯಾಗಿದೆ. ಈ ಕಾಲದಲ್ಲಿ ಹೊಯ್ಸಳ ವಾಸ್ತುಶಿಲ್ಪ ಗಮನಾರ್ಹ ಬದಲಾವಣೆ ತೋರಿಸಿದರೆ, ಸೇವುಣ ವಾಸ್ತುಶಿಲ್ಪ ಹೆಚ್ಚಿನ ವೈಶಿಷ್ಟ್ಯಗಳನ್ನು ಪ್ರದರ್ಶಿಸಲಿಲ್ಲ. ಅಂಬರನಾಥ ಬಲಸಾನೆ, ಪೆಡಗಾಂವ, ಸಾತಗಾಂವ, ಲೊಣರ್, ಪಾಟಣ, ವಾಘುಲಿ, ತಹಕಾರಿ, ಅಕೋಲಾ, ಕೊಕಮಠಾನ್ ಮೊದಲಾದೆಡೆಗಳಲ್ಲಿ ಸೇವುಣರ ವಾಸ್ತುಶಿಲ್ಪದ ಪ್ರಾತಿನಿಧಿಕವೆನ್ನ ಬಹುದಾದ ದೇವಾಲಯಗಳಿವೆ. ಶಿವ, ವಿಷ್ಣು, ಗಣಪತಿ, ಜಗದಾಂಬಿಕೆ, ಭವಾನಿ ಮೊದಲಾದ ದೇವತೆಗಳ ಹೆಸರಿನಲ್ಲಿ ಈ ದೇವಾಲಯಗಳಿವೆ.

	ಸೇವುಣರ ದೇವಾಲಯಗಳು ಗಾತ್ರದಲ್ಲಿ ಚಿಕ್ಕವು. ಅವುಗಳಲ್ಲಿ ಅತಿದೊಡ್ಡದೆಂದರೆ ನಾಸಿಕ್ ಜಿಲ್ಲೆಯ ಸಿನ್ನಾರ್‍ನಲ್ಲಿರುವ ಗೊಂಡೇಶ್ವರ ದೇವಾಲಯ. ಈ ದೇವಾಲಯಗಳಲ್ಲಿ ಬಳಸಿದ ಕೂಡುಕಂಬಗಳು ಏಕಶಿಲೆಯಾಗಿದ್ದು, ಮೊಟಕಾಗಿದ್ದುದರಿಂದ ಮತ್ತು ಅದನ್ನಾಧರಿಸಿ ಇಡೀ ದೇವಾಲಯದ ರಚನೆ ರೂಪಿಸಿದ್ದರಿಂದ ಅವು ದೊಡ್ಡದಾಗಿ ರೂಪ ಗೊಳ್ಳಲು ಅವಕಾಶವಾಗಲಿಲ್ಲ. ದೇವಾಲಯಗಳು ಸಮಕೋನಾಕಾರದಲ್ಲಿ ಅಥವಾ ನಕ್ಷತ್ರಾಕಾರದಲ್ಲಿವೆ. ಈ ಆಕಾರಕ್ಕೆ ಉತ್ತರದ ಸೋಲಂಕಿ ದೇವಾಲಯಗಳ ಮಾದರಿಯ ಪ್ರಭಾವ ಕಾರಣವೆಂದು ಭಾವಿಸಲಾಗಿದೆ. ಸೇವುಣ ದೇವಾಲಯಗಳಲ್ಲಿ ಸಾಮಾನ್ಯವಾಗಿ ಗರ್ಭಗೃಹ, ಮುಂಗೋಣೆ ದೊಡ್ಡ ಮಂಟಪ ಮತ್ತು ದ್ವಾರಮಂಟಪಗಳು ಕಂಡುಬರುತ್ತವೆ. ಶಿವಾಲಯಗಳ ಮುಂಭಾಗದಲ್ಲಿ ನಂದಿಮಂಟಪಗಳಿರುತ್ತವೆ. ಕೆಲವು ಪಂಚಕೂಟ ದೇವಾಲಯಗಳಿವೆ.

	ಈ ದೇವಾಲಯ ರಚನೆಗೆ ಜ್ವಾಲಾಮುಖಿ ಶಿಲೆಗಳನ್ನು ಬಳಸುತ್ತಿದ್ದರು. ಇದರಿಂದ ಇವು ಚಾಳುಕ್ಯರ ದೇವಾಲಯಗಳ ನಯಗಾರಿಕೆ ಕಳೆದು ಕೊಂಡುವು. ಕೆಲವೆಡೆ ಬಿಟ್ಟರೆ ಉಳಿದಂತೆ ದೇವಾಲಯಗಳ ಕಂಬಗಳಲ್ಲಿ ಕಲಾಕುಶಲತೆ ವಿರಳ. ಸಭಾಮಂಟಪದ ಚಾವಣಿ ಕಲಾತ್ಮಕವಾಗಿದ್ದರೆ ಗರ್ಭಗುಡಿಯ ಚಾವಣಿ ಸರಳವಾಗಿರುತ್ತದೆ. ಚಾವಣಿಗಳನ್ನು ಕೆಲವೆಡೆ ಮೂಲೆಚಪ್ಪಡಿಗಳನ್ನು ಬಳಸಿ ಗೋಪುರದಂತೆ ನಿರ್ಮಿಸಿ ಮೇಲೆ ಕಿರಿದಾದ ಬಾಯಿಬಿಟ್ಟು ಅದನ್ನು ಇನ್ನೊಂದು ಚಪ್ಪಡಿಯಿಂದ ಮುಚ್ಚಲಾಗಿದೆ. ಇಂತಹ ಮೇಲು ಚಪ್ಪಡಿಗಳಲ್ಲಿ ಕಮಲದ ಕೆತ್ತನೆಗಳಿರುತ್ತವೆ.

	ಈ ಕಾಲದ ದೇವಾಲಯಗಳ ವೈಶಿಷ್ಟ್ಯವೆಂದರೆ ಅವುಗಳ ಶಿಖರದ ವಿನ್ಯಾಸ. ಇದು ಈ ದೇವಾಲಯಗಳನ್ನು ಉತ್ತರದ ಸೋಲಂಕಿ ಮತ್ತು ದಕ್ಷಿಣ ಚಾಳುಕ್ಯ ಶೈಲಿಯಿಂದ ಬೇರ್ಪಡಿಸಿದೆ. ಈ ಶಿಖರಗೋಪುರ ನಾಲ್ಕು ಮೂಲೆಯಾಕಾರದಲ್ಲಿದ್ದು ನೇರವಾಗಿ ಮೇಲೇರುತ್ತ ಅಟ್ಟುಗಳ ನಡುವೆ ಚಿತ್ರಿತ ಅಲಂಕಾರ ಕೆಲಸ ಮಾಡಲಾಗಿದೆ. ತುದಿಯಲ್ಲಿ ಚಪ್ಪಡಿಯಿಂದ ಮುಚ್ಚಲಾಗಿರುತ್ತದೆ. ಕೆಲವು ಗೋಪುರಗಳನ್ನು ಇಟ್ಟಿಗೆಗಳಿಂದ ಕಟ್ಟಲಾಗಿದೆ.

	 ಇವರ ಕಾಲದ ದೇವಾಲಯಗಳಲ್ಲಿ ಬಹುತೇಕ ದೇವಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಜೀರ್ಣಗೊಂಡಿವೆ. ಹೀಗೆ ಭಗ್ನಗೊಳ್ಳಲು ಅವುಗಳ ಅಡಿಪಾಯ ಆಳವಾಗಿರದಿದ್ದುದು ಮತ್ತು ಸುಭದ್ರವಾಗಿರದಿ ದ್ದುದು ಹಾಗೂ ಗೋಪುರಗಳನ್ನು ಇಟ್ಟಿಗೆಗಳಿಂದ ಕಟ್ಟುತ್ತಿದ್ದುದು ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

	ಇವರ ದೇವಾಲಯಗಳನ್ನು ವಾಸ್ತುತಜ್ಞರು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಪ್ರಾರಂಭದವು ಮೊದಲ ಗುಂಪಿಗೂ, ಹದಿಮೂರು ಮತ್ತು ಹದಿನಾಲ್ಕನೆಯ ಶತಮಾನದಲ್ಲಿ ಕಟ್ಟಲಾದ ದೇವಾಲಯಗಳು ಎರಡನೆಯ ಗುಂಪಿಗೂ ಸೇರುತ್ತವೆ. ಹೊಯ್ಸಳರ ಜಕಣಾಚಾರಿಯಂತೆಯೇ ಮಹಾರಾಷ್ಟ್ರದಲ್ಲಿ ಹೇಮಾದ್‍ಪಂತ್ ಅಥವಾ ಹೇಮಾದ್ರಿಪಂತನೆಂಬುವನು ಇಲ್ಲಿನ ಬಹುತೇಕ ದೇವಾಲಯಗಳನ್ನು ನಿರ್ಮಿಸಿದನೆಂದು ಪ್ರತೀತಿ. ಆದರೆ ಸೇವುಣರ ಕೊನೆಯ ಕಾಲದ ದೇವಾಲಯಗಳ ಶೈಲಿಯಲ್ಲಿ ಸ್ವಲ್ಪ ಭಿನ್ನತೆಯಿದ್ದು ಅವು ಹೇಮಾದ್ರಿ ರೂಪಿಸಿದ ಶೈಲಿಗೆ ಸೇರಿರಬಹು ದೆಂದೂ ಆದ್ದರಿಂದ ಈ ಶೈಲಿಗೆ ಸೇರಿದ ದೇವಾಲಯಗಳನ್ನು ಹೇಮಾದ್ರಿ ಪಂತ್ ನಿರ್ಮಿಸಿದನೆಂಬ ಪ್ರತೀತಿ ಬೆಳೆಯಿತೆಂದೂ ಅಭಿಪ್ರಾಯವಿದೆ. ಈ ಶೈಲಿಯಲ್ಲಿ ಮಂಟಪದ ಮಧ್ಯೆ ವೇದಿಕೆ ಇದ್ದು ಗುಡಿಯ ಮೂರು ಕಡೆ ಗೂಡುಗಳಿರುವುದು ಕಂಡುಬರುತ್ತದೆ. ನಾಸಿಕ್ ಜಿಲ್ಲೆಯ ಚಾಂದರ್ ಅಥವಾ ಚಂದ್ರಾದಿತ್ಯಪುರ ಮತ್ತು ತ್ರಿಂಗಲ್ವಾಡಿಗಳಲ್ಲಿರುವ ಜೈನ ಗುಹಾ ದೇವಾಲಯಗಳೂ ಈ ಕಾಲದ ವಾಸ್ತು ಮತ್ತು ಕಲೆಯ ನಿದರ್ಶನಗಳಾಗಿವೆ. ಈ ಕಾಲದಲ್ಲಿ ಧರ್ಮಶಾಲೆಗಳು, ಮಠಗಳು, ದುರ್ಗಗಳು ನಿರ್ಮಿತವಾದವು. ದೇವಗಿರಿದುರ್ಗ ಇವರ ವಾಸ್ತುಶಿಲ್ಪದ ಮಹತ್ಸಾಧನೆ.	
	(ಡಿ.ಎಸ್.ಜೆ.)

	ನಾಣ್ಯಗಳು: ದೊರಕಿರುವ ಇವರ ನಾಣ್ಯಗಳು ಕಡಿಮೆ. ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳನ್ನು ಟಂಕಿಸುವ ವಿಷಯ ಶಾಸನಗಳಲ್ಲಿ ಕಾಣಸಿಗುತ್ತದೆ. ಟಂಕೆ ಎಂಬ ತೆರಿಗೆ ಈ ಕಾಲದ ಶಾಸನವೊಂದರಲ್ಲಿ ಕಾಣಬರುತ್ತದೆ. ನಾಣ್ಯಗಳನ್ನು ಅಚ್ಚು ಹಾಕಿಸುವ ಹಕ್ಕನ್ನು ಪಡೆದಿದ್ದವರು ಕೊಡಬೇಕಾಗಿದ್ದ ತೆರಿಗೆ ಇದೆಂದು ವಿದ್ವಾಂಸರ ಮತ ಮತ್ತು ಅದೇ ರೀತಿಯಲ್ಲಿ ನಾಣ್ಯಗಳ ಅಚ್ಚನ್ನು ತಯಾರು ಮಾಡುವವರು, ಅದನ್ನು ಹೊಂದಿರುವವರು ಮುದ್ರೆ ಎಂಬ ತೆರಿಗೆಯನ್ನು ಕೊಡಬೇಕಾಗಿತ್ತು. ಇವರ ಶಾಸನಗಳಲ್ಲಿ ನಿಷ್ಕ, ದ್ರಮ್ಮ, ಗದ್ಯಾಣ, ಸುವರ್ಣ, ಪಣ, ಚವುಲ, ಹಾಗಕಾಕಿನಿ, ಬೇಳೆ, ವೀಸ ಮುಂತಾದ ನಾಣ್ಯಗಳ ಹೆಸರುಗಳು ಕಾಣಸಿಗುತ್ತವೆ. ಈ ಕಾಲದಲ್ಲಿ ಬಹುವಾಗಿ ಬಳಕೆಯಲ್ಲಿದ್ದ ನಾಣ್ಯ ಗದ್ಯಾಣ, ರಾಯಗದ್ಯಾಣ, ಅಂಬಿಲಿಗದ್ಯಾಣ, ಪ್ರಿಯಗ್ರಾಹಿಗಜಮಲ್ಲಗದ್ಯಾಣ ಎಂಬ ಪ್ರಭೇದಗಳು ಕಾಣಬಂದರೂ ಅವುಗಳ ಖಚಿತರೂಪ ತಿಳಿದಿಲ್ಲ. ಲೊಕ್ಕಿಗದ್ಯಾಣ, ಅಂದರೆ ಲೊಕ್ಕಿಗುಂಡಿಯಲ್ಲಿ ಟಂಕಿಸಲಾದ ಗದ್ಯಾಣಗಳು ಈ ಕಾಲದಲ್ಲಿಯೂ ಬಳಕೆಯಲ್ಲಿದ್ದವು.

	ಇದುವರೆಗೂ ದೊರಕಿರುವ ಇವರ ನಾಣ್ಯಗಳು ಪದ್ಮಟಂಕ ಎಂಬ ಪ್ರಭೇದಕ್ಕೆ ಸೇರಿದವು. ತೆಳುವಾದ ಚಿನ್ನದ ತಗಡಿನ ಮೇಲೆ ಮಧ್ಯದಲ್ಲಿ ಪದ್ಮದ ಚಿಹ್ನೆಯ ತಲೆ ಇರುವ ಅಚ್ಚನ್ನು ಬಡಿದು ಮಾಡಿದವು. ಈ ಬಡಿಯುವಿಕೆಯಿಂದ ನಾಣ್ಯ ಸಣ್ಣ ಬಟ್ಟಲಿನ ಆಕಾರವನ್ನು ಪಡೆದಿರುತ್ತದೆ. ಸುತ್ತಲೂ ಕೆಲವು ಚಿಹ್ನೆಗಳು ಮತ್ತು ರಾಜನ ಹೆಸರೂ ಇರುತ್ತವೆ. ಮಧ್ಯದಲ್ಲಿ ಪದ್ಮವಾದರೆ, ಅದರ ಎದುರುಬದರಿನಲ್ಲಿ ಶ್ರೀ ಎಂಬ ಕನ್ನಡ ಅಕ್ಷರ, ಮೂರನೆಯದು ಶಂಖ, ನಾಲ್ಕನೆಯದು ನಾಗರೀಲಿಪಿಯಲ್ಲಿ ಬರೆದ ರಾಜನ ಹೆಸರು. ಮಧ್ಯದ ಜಾಗ ಕೆಲವು ವೇಳೆ ಚುಕ್ಕೆಗಳು ಇಲ್ಲವೆ ಪ್ರಾಣಿಗಳನ್ನು ಒಳಗೊಂಡಿರುತ್ತವೆ. ಸಾಮಾನ್ಯವಾಗಿ ಇವರ ಚಿನ್ನದ ಪದ್ಮಟಂಕೆಗಳ ತೂಕ 57 ಗ್ರೇನ್‍ಗಳು. ಇವು ವೃತ್ತಾಕಾರದವು, ಇವುಗಳ ವ್ಯಾಸ 15 ಮಿಮೀ.

	ಇದುವರೆಗೂ ಐದನೆಯ ಭಿಲ್ಲಮ, ಎರಡನೆಯ ಸಿಂಘಣ, ಕೃಷ್ಣ, ಮಹಾದೇವ ಮತ್ತು ರಾಮಚಂದ್ರ-ಇವರ ನಾಣ್ಯಗಳು ಮಾತ್ರ ದೊರಕಿವೆ. ಇವರ ನಾಣ್ಯಗಳು ಆಂಧ್ರಪ್ರದೇಶದ ಕರೀಂನಗರ, ಮೇದಕ್, ಮಹಬೂಬ್‍ನಗರ ಮತ್ತು ಕೃಷ್ಣ ಜಿಲ್ಲೆಗಳಲ್ಲೂ ಮಹಾರಾಷ್ಟ್ರ, ಒರಿಸ್ಸ, ಮಧ್ಯಪ್ರದೇಶ ಮತ್ತು ಕರ್ನಾಟಕಗಳಲ್ಲಿ ದೊರಕಿವೆ. ಕೃಷ್ಣ ಜಿಲ್ಲೆಯ ರಾಚಪಟ್ಟಣದಲ್ಲಿ ದೊರಕಿದ ನಾಣ್ಯಗಳು ಇತಿಹಾಸದ ದೃಷ್ಟಿಯಿಂದ ಮುಖ್ಯವಾದವು. ಇತ್ತೀಚೆಗೆ ದೇವಲ ಜಹರಿಯಲ್ಲಿ ದೊರಕಿದ 5ನೆಯ ಭಿಲ್ಲಮನ ನಾಣ್ಯಗಳಲ್ಲಿ ಶ್ರೀಭಿಲ್ಲಮದೇವ ಎಂಬ ನಾಗರೀ ಬರೆಹವಿದೆ. ಸೋನ್‍ಪುರದಲ್ಲಿ ದೊರೆತ 2ನೆಯ ಸಿಂಘಣನ ನಾಣ್ಯಗಳಲ್ಲಿ ಸಿಂಘಣ ಎಂಬ ನಾಗರೀ ಬರೆಹ, ಶ್ರೀ ಎಂಬ ಕನ್ನಡ ಅಕ್ಷರ ಮತ್ತು ಚಿತ್ರಗಳಿವೆ. ಮಧ್ಯಪ್ರದೇಶದ ಪರಸಿದ್‍ನಲ್ಲಿ ದೊರಕಿದ ಇವನ ನಾಣ್ಯದ ಮೇಲೆ, ಸಿಂಘಣ ಎಂಬ ನಾಗರೀ ಲಿಪಿಯ ಬರೆಹದ ಕೆಳಗೆ ಕತ್ತಿಯಿದೆ. ಇನ್ನೊಂದು ರೀತಿಯ ನಾಣ್ಯದ ಮೇಲೆ ಕತ್ತಿಗೆ ಬದಲು ಬಿಲ್ಲು, ಕೃಷ್ಣನ ನಾಣ್ಯಗಳ ಮೇಲೆ ಕನ್ಹಪ ಮತ್ತು ಕನ್ಹ ಎಂಬ ಬರೆವಣಿಗೆಯಿದೆ. ಮಹಾದೇವನ ನಾಣ್ಯಗಳ ಮೇಲೆ ನಾಗರೀಲಿಪಿಯಲ್ಲಿ ಮಹಾದೇವ, ಮಹಾದೇ, ಮಹಾ ಎಂಬ ಬರೆಹ ಕಾಣುತ್ತದೆ. ರಾಮಚಂದ್ರನ ನಾಣ್ಯಗಳ ಮೇಲೆ ಶ್ರೀರಾಮ ಅಥವಾ ರಾಮ ಎನ್ನುವ ನಾಗರೀ ಬರೆಹವಿದೆ. ಇವನ ಇನ್ನೊಂದು ನಮೂನೆಯ ನಾಣ್ಯದಲ್ಲಿ ಪದ್ಮದ ಬದಲು ಗರುಡನ ಚಿತ್ರವೂ ರಾಮಚ ಎಂಬ ನಾಗರೀ ಲಿಪಿಯ ಬರೆಹವೂ ಇದೆ. 
(ಎ.ವಿ.ಎನ್.)

	ಶಾಸನಗಳು : ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಇವರಿಗೆ ಸೇರಿದ ಒಟ್ಟು ಸು. 600 ಶಾಸನಗಳು ಉಪಲಬ್ಧವಾಗಿವೆ. ಶಾಸನಗಳಲ್ಲಿ ಸೆಉಣ, ಸೇಗುಣ, ಸೇವುಣ, ಸೇಮುಣ ಮತ್ತು ಸೇಗುಣ್ಣ ಎಂಬ ರೂಪಗಳು ಕಾಣಸಿಗುತ್ತವೆ. ಇವರ ಶಾಸನಗಳಲ್ಲಿ ಎರಡನೆಯ ಭಿಲ್ಲಮನ ಕಾಲದ (1000) ಸಂಗಮನೇರ್ ಶಾಸನ ಅತ್ಯಂತ ಪ್ರಾಚೀನವಾದುದು; ಮೇಲುಗಿದೇವನ ಕಾಲದ 1334ರ ಬೋರಾಡ್ಡೀ ಶಾಸನ ಅತ್ಯಂತ ಈಚಿನದು. ಎಲ್ಲ ಅರಸರ ಶಾಸನಗಳೂ ದೊರೆತಿಲ್ಲ. ಎರಡನೆಯ ಭಿಲ್ಲಮ, ಮೂರನೆಯ ಭಿಲ್ಲಮ, ಎರಡನೆಯ ಸೇವುಣಚಂದ್ರ, ಐರಮದೇವ, ಸೇವುಣದೇವ, ಐದನೆಯ ಭಿಲ್ಲಮ, ಜೈತುಗಿ, ಸಿಂಘಣ, ಕೃಷ್ಣ, ಮಹಾದೇವ, ರಾಮಚಂದ್ರ, ಮೇಲುಗಿದೇವ-ಈ ಅರಸರ ಶಾಸನಗಳು ಲಭ್ಯವಾಗಿವೆ. ಇವರಿಗೆ ಸೇರಿದ, ಆದರೆ ಅರಸರ ಹೆಸರಿಲ್ಲದ ಸು. 25 ಶಾಸನಗಳು ದೊರೆತಿವೆ. ಒಟ್ಟು ಶಾಸನಗಳಲ್ಲಿ ಐದು ತಾಮ್ರಶಾಸನಗಳು, ಮಿಕ್ಕವು ಶಿಲಾಶಾಸನಗಳು. ಇವುಗಳಲ್ಲಿ ಯಾದವನಾರಾಯಣ, ಯಾದವವಂಶೋದ್ಭವ, ದ್ವಾರಾವತೀಪುರ ವರಾಧೀಶ್ವರ, ಸೇಉಣಚಕ್ರವರ್ತಿ, ಸೇಉಣವಂಶಶಿಖಾಮಣಿ ಮುಂತಾದ ಬಿರುದುಗಳಿವೆ.

	1896ರಲ್ಲಿ ಫ್ಲೀಟ್ ಅವರು ದಿ ಡೈನಾಸ್ಟೀಸ್ ಆಫ್ ಕ್ಯಾನರೀಸ್ ಡಿಸ್ಟ್ರಿಕ್ಟ್ಸ್ ಎಂಬ ಕೃತಿಯನ್ನು ಪ್ರಕಟಿಸಿದಾಗ ಲಭ್ಯವಿದ್ದ ಇವರ ಶಾಸನಗಳ ಸಂಖ್ಯೆ ಕೇವಲ 120. ಆದರೆ ಅನಂತರ ಕಾಲದಲ್ಲಿ ಮುಖ್ಯವಾಗಿ ಭಾರತದ ಪುರಾತತ್ತ್ವ ಸರ್ವೇಕ್ಷಣದ ಶಾಸನ ಶಾಖೆಯ ಸತತ ಕ್ಷೇತ್ರಕಾರ್ಯಗಳಿಂದಾಗಿ ಶಾಸನಗಳ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಿದೆ. ಇನ್ನೂ ಹಲವಾರು ಶಾಸನಗಳು ಪ್ರಕಟವಾಗಬೇಕಾಗಿವೆ.

	ಇವರ ಶಾಸನಗಳಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯ ಶಾಸನಗಳೇ ಹೆಚ್ಚು. ಕೆಲವು ಸಂಸ್ಕøತ ಭಾಷೆ ಮತ್ತು ಕನ್ನಡ ಲಿಪಿಯಲ್ಲಿಯೂ ಮತ್ತೆ ಕೆಲವು ಸಂಸ್ಕøತ ಭಾಷೆ ಮತ್ತು ನಾಗರೀ ಲಿಪಿಯಲ್ಲಿಯೂ ಇವೆ. ಇವರ ಆಳಿಕೆಯ ಕೊನೆಗಾಲಕ್ಕೆ ಸೇರಿದ ಕೆಲವು ಶಾಸನಗಳು ಮರಾಠಿ ಭಾಷೆಯಲ್ಲಿವೆ. ಕಳಚುರಿ, ಹೊಯ್ಸಳ ಮತ್ತು ಸೇವುಣ ಶಾಸನಗಳಲ್ಲಿ ಬಳಸಿದ ಲಿಪಿಯಲ್ಲಿ ಅಂಥ ಭಿನ್ನತೆಯೇನೂ ಕಂಡುಬರುವುದಿಲ್ಲ. ಅಕ್ಷರಗಳು ತುಂಬಾ ಗುಂಡಾಗಿಯೂ ಅಲಂಕಾರಯುಕ್ತವಾಗಿಯೂ ಇವೆ.

ಇವರ ಶಾಸನಗಳಲ್ಲಿ ಸಮಕಾಲೀನ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳ, ವಿದ್ಯಾಭ್ಯಾಸ ಮತ್ತು ಆಡಳಿತ ಪದ್ಧತಿಗಳ ಒಂದು ಚಿತ್ರ ಕಾಣಸಿಗುತ್ತದೆ. ಮಾಳವದ ಅರಸರು, ಘೂರ್ಜರ, ಹೊಯ್ಸಳ ಮತ್ತು ಕಾಕತೀಯ ಮುಂತಾದ ರಾಜಮನೆತನಗಳ ಮೇಲೆ  ಇವರ ಅರಸರು ಸಾಧಿಸಿದ ದಿಗ್ವಿಜಯಗಳನ್ನು ಕುರಿತು ಇವರ ಶಾಸನಗಳು ಬಹುವಾಗಿ ವರ್ಣಿಸುತ್ತವೆ.

	ಶಾಸನ ಕಲ್ಲುಗಳ ಮೇಲೆ ಶಂಖ, ಲಿಂಗ, ಪ್ರತಿಗ್ರಹಿ, ಹಸು ಕರು, ಸೂರ್ಯ, ಚಂದ್ರ, ನಂದಿ, ಗರುಡ, ವಿಷ್ಣು ಮತ್ತು ಲಕ್ಷ್ಮೀ, ಕಲಶ, ಮುಕ್ಕೊಡೆ, ಕಮಂಡಲು ಮುಂತಾದ ಶಿಲ್ಪಗಳನ್ನು ಕೆತ್ತಿರುವುದು ಕಂಡುಬರುತ್ತದೆ.

	ಮಹಾಮಂಡಲೇಶ್ವರ ಬಂದರಸ ಅಥವಾ ಬಂದುಗಿ, ಜೈತ್ರಸಿಂಹ, ವಿರುಪದೇವರಸ, ಮಾಯಿದೇವ ಬೀಚಿಸೆಟ್ಟಿ, ಲಕ್ಷ್ಮೀದೇವ, ಸಹದೇವ ದಂಡನಾಥ, ಸಾಮಂತ ಖೋಲೇಶ್ವರ ಮತ್ತು ಅವನ ಮಗ ರಾಮ, ಹರದೇವ ಮತ್ತು ಮಹಾದೇವ, ಮಾಯಿದೇವಪಂಡಿತ, ಹೊನ್ನಬೊಮ್ಮಿಸೆಟ್ಟಿ, ಬೀಚಣ ಮಲ್ಲಿಸೆಟ್ಟಿ, ಲೆಕ್ಕರಸ, ಚಂದ್ರದೇವ, ಕೇಶವದೇವ, ಕೂಚರಸ, ಚಟ್ಟರಸ, ದೇವರಾಜ, ಸಾಳುವ ಲೆಕ್ಕಮ ಹಾಗೂ ಪುರುಷೋತ್ತಮ ಮೊದಲಾದವರು ಇವರ ಶಾಸನಗಳು ಉಲ್ಲೇಖಿಸುವ ಪ್ರಮುಖ ಅಧಿಕಾರಿಗಳಲ್ಲಿ ಕೆಲವರು. ಭಾಗುಬಾಯಿ ಎಂಬ ಸ್ತ್ರೀಯೊಬ್ಬಳು ಸರ್ವಾಧಿಕಾರಿಯಾಗಿರುವುದು ಗಮನ ಸೆಳೆಯುವಂಥದು. ಪ್ರಸಿದ್ಧ ವೀರಶೈವ ಸುಧಾರಕ ಸಂಗನಬಸವ, ಖಗೋಳಶಾಸ್ತ್ರಜ್ಞ ಚಂಗದೇವ, ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯ, ಧರ್ಮಗುರು ಶಂಕರಸ್ವಾಮಿ, ರಾಜಗುರು ಸರ್ವೇಶ್ವರದೇವ ಮೊದಲಾದವರ ಉಲ್ಲೇಖ ಶಾಸನಗಳಲ್ಲಿ ಕಾಣಸಿಗುತ್ತದೆ. ಹಾವೇರಿ, ಹೆಮ್ಮೆನಬೇತೂರು, ಹಿಲ್ಲ, ಸೊನ್ನಲಿಗೆ, ಗದಗ, ಬಳ್ಳಿಗಾವೆ, ಲಕ್ಷ್ಮೇಶ್ವರ, ಚೌಡದಾನಪುರ ಮೊದಲಾದ ಧಾರ್ಮಿಕ ಕೇಂದ್ರಗಳನ್ನು ಮತ್ತು ಬೊಮ್ಮಕೂರು, ಅಕ್ಕಲಕೋಟೆ, ಹಿರೇಬೇವಿನೂರು, ದೇವಣಗಾವೆ, ಮುದ್ಗಲ್, ಅಣ್ಣಿಗೇರಿ, ಲಕ್ಕುಂಡಿ, ಕುಕ್ಕನೂರು, ಗಬ್ಬೂರು ಮುಂತಾದ ಹಲವು ಬ್ರಹ್ಮಪುರಿ ಅಥವಾ ಅಗ್ರಹಾರಗಳನ್ನು ಶಾಸನಗಳು ಹೆಸರಿಸುತ್ತವೆ.

	ಇವರ ಶಾಸನಗಳಲ್ಲಿ ಹೆಚ್ಚಿನವು ದಾನಶಾಸನಗಳು. ಇವುಗಳಲ್ಲಿ ಶಿವ, ಬ್ರಹ್ಮ, ವಿಷ್ಣು, ಸೂರ್ಯ, ಭವಾನಿ, ಲಕ್ಷ್ಮಿ, ನರಸಿಂಹ ಮುಂತಾದ ದೇವತೆಗಳ ಹಾಗೂ ಜಿನತೀರ್ಥಂಕರರ ಸ್ತುತಿ ಇವೆ. ನೊಳಂಬವಾಡಿ 32000, ಬನವಾಸಿ 12000, ಪಲಸಿಗೆ 12000, ಪಾಳಿಯಾಂಡ 4000, ಕರಹಡ 4000, ಕೊಂಡಿ 3000, ಮಿರಿಂಜೆ 3000, ಎಡೆದೊರೆ 2000, ಅಲಂದೆ 1000, ಸಿಂದವಾಡಿ 1000, ತರ್ದವಾಡಿ 1000, ಬೆಳ್ವೊಲ 300, ಪುಲಿಗೆರೆ 300, ಅರಳು 300, ಹಗರಿಟಗೆ 300 ಮುಂತಾದ ಪ್ರಸಿದ್ಧ ನಾಡುಗಳನ್ನಲ್ಲದೆ ಹತ್ತಾರು ಸಣ್ಣಪುಟ್ಟ ಆಡಳಿತ ವಿಭಾಗಗಳನ್ನು  ಇವರ ಶಾಸನಗಳು ಹೆಸರಿಸುತ್ತವೆ.

	ಸಾಹಿತ್ಯಕವಾಗಿಯೂ ಇವರ ಶಾಸನಗಳು ಗಮನಾರ್ಹವಾಗಿವೆ. ತಿಳಿವಳ್ಳಿ, ದೇವಸ್ಥಾನ ಹಕ್ಕಲು ಹಾಗೂ ದಾವಣಗೆರೆ ಶಾಸನಗಳು ಒಳ್ಳೆಯ ಶಾಸನಕಾವ್ಯಕ್ಕೆ ನಿದರ್ಶನಗಳು. ವಚನಸಾಹಿತ್ಯ ಬೆಳೆದಂತೆ, ಶಾಸನಗಳ ಮೇಲೆ ಅದರ ಪ್ರಭಾವ ಪ್ರಾರಂಭವಾಯಿತು. ಸು. 25 ಶಾಸನಗಳಲ್ಲಿ ಸೊನ್ನಲಿಗೆಯ ಸಿದ್ಧರಾಮನ ವಚನಗಳು ಉದಾಹೃತ ವಾಗಿವೆ. ಕೃಷ್ಣನ ಟಾಕಳಿ ಶಾಸನದಲ್ಲಿ ಸಿದ್ಧರಾಮನ ವಚನವೊಂದರ ಸಂಸ್ಕøತ ಭಾಷಾಂತರ ಕೊಟ್ಟಿರುವುದು ಗಮನಾರ್ಹ. ಕೆಲವು ಸಂಸ್ಕøತ ಶಾಸನಗಳನ್ನು ಹರಿಶ್ಚಂದ್ರ, ವೈಜನಾಥ, ಮಾಧವ, ಕವಿರಾಜ ವಾಗ್ದೇವತಾಭಟ್ಟ, ವೇದಾರ್ಥವಾದಿ ಸೂರ್ಯನರಸಿಂಹ, ವೈಜಾರ್ಯ ಹಾಗೂ ಶಾರದಾದರ್ಪಣನೆನಿಸಿದ ಮಾಯಿದೇವ ಮೊದಲಾದವರು ರಚಿಸಿದ್ದಾರೆ. ಕನ್ನಡ ಶಾಸನಕವಿಗಳಲ್ಲಿ ಬೆಡಗಿನ ಸೋಮನಾಥ ಪಂಡಿತ, ವಾಮನ, ಕನ್ನಡ ಸರಸತಿ ಎನಿಸಿದ ದೇವ, ಹುಡುಗೆಯ ಸೋಮಯ್ಯ, ಸೇನಬೋವ ಬಾಚರಸ, ಗೋಪಿರಾಜ ಮತ್ತು ಈಶ್ವರಾರ್ಯ ಮೊದಲಾದವರು ಸೇರಿದ್ದಾರೆ. ಕವಿಯ ಹೆಸರಿಲ್ಲದಿದ್ದರೂ ಸಾಹಿತ್ಯದ ದೃಷ್ಟಿಯಿಂದ ಗಮನಾರ್ಹವಾದ ಶಾಸನಗಳೂ ಇವೆ.	
											(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ